ಸುದ್ದಿ9ಸುರತ್ಕಲ್: ಮೊಗವೀರ ನಾಯಕ ಗಂಗಾಧರ ಪಾಂಗಳರನ್ನು ಅಪಘಾತ ನಡೆಸಿ ಕೊಲೆಗೈದು ತಲೆಮರೆಸಿದ್ದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿಯನ್ನು ಬೆಂಬಲಿಸಿ ನಡೆಯುತ್ತಿದ್ದ ಸಭೆಯ ಮೇಲೆ ಪಾಂಗಳ ಬೆಂಬಲಿಗರು ದಾಳಿ ನಡೆಸಿದ ಘಟನೆ ಆದಿತ್ಯವಾರ ಸಂಜೆ ಬೈಕಂಪಾಡಿಯ ವಿಶ್ವಸಾಗರ ಹೋಟೆಲ್ ಹಾಲ್ನಲ್ಲಿ ನಡೆದಿದೆ. ಘಟನೆಯಲ್ಲಿ ಮಾರಾಮಾರಿ ನಡೆದಿದ್ದು ಕೆಲವರ ಮೇಲೆ ಹಲ್ಲೆ ನಡೆದಿದೆ ಎಂದೂ ಹೇಳಲಾಗುತ್ತಿದೆ.

ಘಟನೆಯ ವಿವರ:
ಕಳೆದ ಮೇ ತಿಂಗಳಿನಲ್ಲಿ ಗಂಗಾಧರ ಪಾಂಗಳ ಅವರನ್ನು ಅಪಘಾತ ನಡೆಸಿ ಕೊಲೆಗೈಯಲಾಗಿತ್ತು. ಸತೀಶ್ ಬೈಕಂಪಾಡಿ ಹಾಗೂ ಆತನ ಸಹಚರರು ಕೃತ್ಯವೆಸಗಿದ್ದರು. ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದರೂ ಸೂತ್ರಧಾರಿ ಸತೀಶ್ ಬೈಕಂಪಾಡಿ ತಲೆಮರೆಸಿಕೊಂಡಿದ್ದ. ನಾಲ್ಕು ದಿನಗಳ ಹಿಂದೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಆತನನ್ನು ಪಣಂಬೂರು ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಬಳಿಕ ಆರೋಪಿ ಮತ್ತೊಂದು ಪ್ರಕರಣದಲ್ಲಿ ಪಾಲ್ಗೊಂಡಿದ್ದ ಬಗ್ಗೆ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಸುರತ್ಕಲ್ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಸುರತ್ಕಲ್ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಮಧ್ಯೆ ಸತೀಶ್ ಬೈಕಂಪಾಡಿ ಬೆಂಬಲಿಗರೆನ್ನಲಾದ ಕೆಲವು ಮಂದಿ ಆದಿತ್ಯವಾರ ಸಂಜೆ ಬೈಕಂಪಾಡಿಯ ವಿಶ್ವಸಾಗರ ಹೋಟೆಲ್ ಹಾಲ್ನಲ್ಲಿ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದರೆನ್ನಲಾಗಿದೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಗಂಗಾಧರ ಪಾಂಗಳರ ಬೆಂಬಲಿಗರು ಸಭೆಯ ಮೇಲೆ ದಾಳಿ ನಡೆಸಿ ಕೆಲವರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಲ್ಲಮೂಲಗಳ ಪ್ರಕಾರ ಸಭೆಯಲ್ಲಿ ಮಾರಾಮಾರಿ ನಡೆದಿದ್ದು, ಪೊಲೀಸರು ಇದಾವುದನ್ನೂ ದೃಢಪಡಿಸುತ್ತಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪಣಂಬೂರು ಠಾಣಾ ಪೊಲೀಸರು ಆಗಮಿಸಿ ಎರಡೂ ಗುಂಪನ್ನು ಚದುರಿಸಿದ್ದಾರೆ ಎನ್ನಲಾಗುತ್ತಿದೆ.
008p

008pp

008ppp

By suddi9

Leave a Reply

Your email address will not be published. Required fields are marked *