ಮಂಗಳೂರು: ಭಜರಂಗದಳ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಮೇಲೆ ಮಾರಣಾಂತಿಕ ಹಲ್ಲೆಗೈದು, ಭಜರಂಗದಳ ಪ್ರತಿಭಟನೆಯಿಂದಾಗಿ ಅಮಾನತು ಆಗಿದ್ದ ಕಾವೂರು ಠಾಣಾಧಿಕಾರಿ ಉಮೇಶ್ ಮತ್ತದೇ ಠಾಣೆಯಲ್ಲಿ ವಕ್ಕರಿಸಿದ್ದಾರೆ. ಆದಿತ್ಯವಾರದಿಂದ ಮತ್ತೆ ಹಳೆಯ ಠಾಣೆಯಲ್ಲೇ ಛಾರ್ಜ್ ಪಡೆದಿರುವ ಉಮೇಶ್ ಸೋಮವಾರದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚರಣ್ ಕೇಸೊಂದಕ್ಕೆ ಸಂಬಂಧಿಸಿ ಠಾಣೆಗೆ ಬಾರದೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಆರೋಪಿಸಿ ಆತನ ಮೇಲೆ ಕಾವೂರು ಎಸ್.ಐ. ಉಮೇಶ್ ತಮ್ಮ ಪ್ರತಾಪ ತೋರಿಸಿದ್ದರು. ಆತನನ್ನು ಠಾಣೆಯ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಭಜರಂಗದಳ ಎರಡು ದಿನಗಳ ಕಾಲ ಠಾಣೆಯ ಮುಂದೆ ಪ್ರತಿಭಟನೆ ನಡೆಸಿತ್ತು. ಜಿಲ್ಲೆಗೆ ಕಾರ್ಯಕ್ರಮ ನಿಮಿತ್ತ ಬಂದಿದ್ದ ಬಿಜೆಪಿ ನಾಯಕ ಯಡಿಯೂರಪ್ಪ ಅವರು ಕಾವೂರು ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಯಡಿಯೂರಪ್ಪ ಬಂದು ಹೋದ ಮರುದಿನವೇ ಉಮೇಶ್‍ರನ್ನು ಕಮಿಷನರ್ ಆದೇಶದ ಮೇಲೆ ಅಮಾನತು ಮಾಡಲಾಗಿತ್ತು. ಆದರೆ ಪ್ರಕರಣ ನಡೆದು 15 ದಿನಗಳು ಉರುಳುವುದರೊಳಗಾಗಿ ಉಮೇಶ್ ಮತ್ತೆ ಅದೇ ಠಾಣೆಗೆ ಬಂದಿರುವುದು ಭಜರಂಗಿಗಳ ಪ್ರತಿಭಟನೆಗೆ ಫಲ ಸಿಗದಂತಾಗಿದೆ.

