ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ
ಮೈಸೂರು: ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ ನಡೆದಿದೆ.
ಜ್ಯೋತಿ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ. ಮನೆಯವರ ವಿರೋಧ ನಡುವೆಯೂ 4 ವರ್ಷದ ಹಿಂದೆ ಮಚ್ಚೂರು ಗ್ರಾಮದ ಆನಂದ್ ಜೊತೆ ಜ್ಯೋತಿ ವಿವಾಹವಾಗಿದ್ದರು. ಮದುವೆ ವೇಳೆ ಮನೆಯಿಂದ ಚಿನ್ನ ಹಾಗೂ ನಗದನ್ನು ಜ್ಯೋತಿ ತೆಗೆದುಕೊಂಡು ಹೋಗಿದ್ದರು. ಮದುವೆ ಬಳಿಕ ಮತ್ತೆ ವರದಕ್ಷಿಣೆ ತರುವಂತೆ ಆನಂದ್ ಮನೆಯವರು ಜ್ಯೋತಿಗೆ ಕಿರುಕುಳ ನೀಡಿದ್ದು, ವರದಕ್ಷಿಣೆ ಕೊಡುವವರೆಗೂ ತವರು ಮನೆಯವರನ್ನು ಭೇಟಿಯಾಗಲು ಅವಕಾಶ ಕೊಡುವುದಿಲ್ಲವೆಂದು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಜ್ಯೋತಿ ಅವರನ್ನು ಭೇಟಿಯಾಗಲು ಬಂದಿದ್ದ ತವರು ಮನೆಯವರಿಗೂ ಆನಂದ್ ಮನೆಯವರು ಅವಮಾನ ಮಾಡಿದ್ದು, ಇದರಿಂದ ಮನನೊಂದು ಜ್ಯೋತಿ ಇಲಿ ಪಾಷಾಣ ಸೇವಿಸಿದ್ದಾರೆ. ನಂತರ ಜ್ಯೋತಿಯನ್ನು ಚಿಕಿತ್ಸೆಗಾಗಿ ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಸಾವನ್ನಪ್ಪಿದ್ದಾರೆ. ಜ್ಯೋತಿ ಆತ್ಮಹತ್ಯೆಗೆ ಪತಿ ಆನಂದ್ ಮನೆಯವರೇ ಕಾರಣ ಎಂದು ಮೃತಳ ಪೋಷಕರು ಆರೋಪಿಸಿದ್ದು, ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.