ಯೋಗ ವಿಶ್ವದ ಆರೋಗ್ಯಕ್ಕೆ ದಿಕ್ಕೂಚಿ: ಮೋದಿ
ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಯೋಗ ಭೂಮಿಯೂ ಹೌದು. ಇಲ್ಲಿ ಕಂಡ ಯೋಗದ ಬೆಳಕು ಇವತ್ತು ವಿಶ್ವದ ಎಲ್ಲೆಡೆ ಪಸರಿಸಿದೆ. ಇಂದು ಯೋಗ ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. ಮೈಸೂರು ಭಾರತದ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಮೊದಲು ಯೋಗವನ್ನು ಕೇವಲ ಮನೆಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಯೋಗ ವ್ಯಕ್ತಿಗೆ ಮಾತ್ರವಲ್ಲ, ವಿಶ್ವ ಮಾನವೀಯತೆಗೆ ಬೇಕಿದೆ. ಕೊರೊನ ಸಾಂಕ್ರಾಮಿಕ ರೋಗ ಸಮಯದಲ್ಲೂ ಕೂಡ ಯೋಗ ದಿನದ ಉತ್ಸಾಹ ಕಡಿಮೆ ಆಗಿರಲಿಲ್ಲ. ಇಂದು ಯೋಗ ದಿನಾಚರಣೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಮ್ಮೆಲರ ಜೀವನಕ್ಕೆ ಯೋಗ ವಿಶ್ವಾಸವನ್ನು ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೈಸೂರಿನಲ್ಲಿ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಜನತೆಗೆ ಯೋಗ ದಿನಾಚರಣೆ ಶುಭಾಶಯಗಳನ್ನು ಹೇಳಿದರು. ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳು, ಯೋಗ ದಿನದ ಪ್ರಯುಕ್ತ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿಗೆ ಪ್ರಣಾಮ ಮಾಡುತ್ತೇನೆ ಎಂದು ಹೇಳೆ ಮಾತು ಪ್ರಾರಂಭಿಸಿದರು.
ಮೈಸೂರಿನಂತಹ ಭಾರತದ ಆಧ್ಯಾತ್ಮಿಕ ಕೇಂದ್ರಗಳಿಂದ ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯೋಗ ಶಕ್ತಿ ಇಂದು ವಿಶ್ವ ಆರೋಗ್ಯಕ್ಕೆ ದಿಕ್ಕೂಚಿಯಾಗಿದೆ. ಇಂದು ಯೋಗವು ಜಾಗತಿಕ ಸಹಕಾರಕ್ಕೆ ಪರಸ್ಪರ ಆಧಾರವಾಗುತ್ತಿದೆ.ಯೋಗವು ಮನುಕುಲಕ್ಕೆ ಆರೋಗ್ಯಕರ ಜೀವನದ ನಂಬಿಕೆಯನ್ನು ನೀಡುತ್ತಿದೆ. ಯೋಗ ಈಗ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಆದ್ದರಿಂದ, ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನದ ಥೀಮ್ ಮಾನವೀಯತೆಗಾಗಿ ಯೋಗ ಆಗಿದೆ.
ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಯೋಗದಿಂದ ಶಾಂತಿಯು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ. ಯೋಗದಿಂದ ನಮ್ಮ ಸಮಾಜಕ್ಕೆ ಶಾಂತಿ ಸಿಗುತ್ತದೆ. ಯೋಗದಿಂದ ಇಂದು ಜೀವನ ಶೈಲಿಯಲ್ಲಿ ಭಾರಿ ಬದಲಾವಣೆ ಆಗಿದೆ. ಯೋಗದಿಂದ ವಿಶ್ವಶಾಮತಿ ನೆಲೆಸಲು ಸಾಧ್ಯ ಎಂದರು. ದೇಶದ 75 ಐತಿಹಾಸಿಕ ಕೇಂದ್ರ ಸ್ಥಳಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಜೀವನದ ಒಂದು ಭಾಗವಲ್ಲ,ಯೋಗ ಜೀವನ ಶೈಲಿಯೇ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಾರ್ಡಿಯನ್ ರಿಂಗ್ ಆಫ್ ಯೋಗ ಮಾಡಲಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಸೂರ್ಯೋದಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ. ಯೋಗದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಆಯುಷ್ಮಾನ್ ಇಲಾಖೆಯಲ್ಲಿ ಸ್ಟಾರ್ಟ್ ಅಪ್ ಕೂಡ ತರಲಾಗಿದೆ. ವಿಶ್ವದಲ್ಲಿ ರೋಗ ಮುಕ್ತಿಗೆ ಯೋಗಾಸನವೇ ಆಧಾರವಾಗಿದೆ. ಪ್ರತಿನಿತ್ಯ ಪ್ರಾಣಾಯಾಮ, ಯೋಗ ಮಾಡೋದನ್ನು ರೂಢಿಸಿಕೊಳ್ಳಿ ಎಂದರು.
ಅರಮನೆ ಎದುರು ಮೋದಿ ಯೋಗ ಮೈಸೂರು ಅರಮನೆ ಇಂದು ಐತಿಹಾಸಿಕ ಯೋಗ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಸ್ವತಹ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು ಮುಕ್ಕಾಲು ತಾಸು ಇಲ್ಲಿ ವಿವಿಧ ಯೋಗಾಸನಗಳನ್ನು ಮಾಡಿದರು. ಸುಮಾರು 10 ಸಾವಿರ ಜನರಿಗೆ ಮೋದಿ ಜತೆ ಯೋಗಾಸನ ಮಾಡಲು ಅವಕಾಶ ಸಿಕ್ಕಿತ್ತು. ಮುಂಜಾನೆ 4 ಗಂಟೆಯಿಂದಲೇ ಜನರು ಮೈಸೂರಿಗೆ ಬರಲಾರಂಭಿಸಿದ್ದರು. 6.34ಕ್ಕೆ ವೇದಿಕೆಗೆ ಬಂದ ಮೋದಿ ಪುಟ್ಟ ಭಾಷಣ ಮುಗಿಸಿದ ಬಳಿಕ ನೇರವಾಗಿ ಮೈದಾನಕ್ಕಿಳಿದು ಯೋಗಾಸನ ಪ್ರಾರಂಭಿಸಿದರು