ಕಲ್ಲಮುಂಡ್ಕೂರು ಸಹಕಾರಿ ಬ್ಯಾಂಕ್ ವಿರುದ್ದದ ಉಪ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆ
ಮೂಡುಬಿದಿರೆ: ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಕಗೊಳಿಸಿರುವ ಸಹಕಾರ ಸಂಘಗಳ ಉಪನಿಬಂಧಕರ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಂಘ ನಿಯಮಿತ ಇಲ್ಲಿ ಆಡಳಿತ ದುರುಪಯೋಗ, ನಿಯಮ ಉಲ್ಲಂಘನೆ ಮತ್ತಿತರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನಾಗಿ ವಿಲಾಸ್ ಅವರನ್ನು ನೇಮಕಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಬ್ಯಾಂಕ್‌ನ ಅಧ್ಯಕ್ಷರು ಸಹಿತ ಕೆಲ ಸದಸ್ಯರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ರಿಟ್ ಅರ್ಜಿಯನ್ನು ಮಾನ್ಯ ಮಾಡಿದೆ. ಸಹಕಾರ ಸಂಘಗಳ ಉಪನಿಬಂಧಕರ ಆದೇಶಕ್ಕೆ ತಡೆ ನೀಡಿ ಆಡಳಿತಾಧಿಕಾರಿಯನ್ನು ತೆರವುಗೊಳಿಸಿದೆ. ಮುಂದಿನ ಒಂದು ತಿಂಗಳೊಳಗೆ ತನಿಖೆ ನಡೆಸುವಂತೆ ಉಪ ನಿಬಂಧಕರಿಗೆ ಸೂಚಿಸಿದೆ. ಮತ್ತು ಮುಂದಿನ ಆದೇಶದವರೆಗೆ ಯಾವುದೇ ನಿರ್ಣಯ ಮತ್ತು ಅಧಿಕಾರ ಚಲಾಯಿಸದಂತೆ ಆಡಳಿತ ಮಂಡಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.