ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ
ಹುಬ್ಬಳ್ಳಿ: ಗುರೂಜಿ ಅವರನ್ನು ದೇವರಂತೆ ಕಾಣುತ್ತಿದ್ದೆವು ಎಂದು ಹೇಳುವ ಮೂಲಕ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಹತ್ಯೆಗೆ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಮರುಕ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಅವರು, ನನ್ನ ಪತಿ ಹೀಗೆ ಮಾಡುತ್ತಾರೆ ಎಂದು ಕನಸ್ಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ. ಗುರೂಜಿ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ಕೆಲಸ ಮಾಡುವ ಪ್ರತಿಯೊಬ್ಬರನ್ನು ಕೂಡ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇಲ್ಲಿವರೆಗೂ ಯಾವತ್ತು ಯಾರಿಗೂ ಗುರೂಜಿ ಮೋಸ ಮಾಡಿಲ್ಲ ಎಂದಿದ್ದಾರೆ.
ಗುರೂಜಿ ನಮ್ಮ ಮನೆಯ ದೇವರು, ನಮ್ಮ ತಂದೆ ತರಹ. ಗುರೂಜಿ ನನಗೆ ಯಾವುದೇ ಆಸ್ತಿ ನೀಡಿಲ್ಲ. ಅಪಾರ್ಟ್‍ಮೆಂಟ್ ಕೂಡ ಗುರೂಜಿ ಅವರ ಹೆಸರಿನಲ್ಲಿದೆ. ಆದರೆ ಒಂದು ಫ್ಲಾಟ್ ಮಾತ್ರ ನಮ್ಮದಾಗಿದೆ. ಅದನ್ನು 20 ಲಕ್ಷ ರೂಪಾಯಿ ಸಾಲ ಮಾಡಿ ಖರೀದಿಸಿದ್ದೇವೆ. ನನ್ನ ಮತ್ತು ಗಂಡನ ಹೆಸರಿನಲ್ಲಿ ಯಾವುದೇ ಬೇನಾಮಿ ಆಸ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಗೂ ಮುನ್ನ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ನನ್ನ ಪತಿ 3 ದಿನದಿಂದ ಮನೆಗೆ ಬಂದಿರಲಿಲ್ಲ. ಹತ್ಯೆ ಮಾಡುವ ಮಟ್ಟಿಗೆ ನನ್ನ ಗಂಡ ಇಳಿಯುತ್ತಾನೆಂದು ಅಂದುಕೊಂಡಿರಲಿಲ್ಲ ಅಂತ ಹೇಳಿದ್ದಾರೆ.