ವಿಟ್ಲ: ಬಸ್‌ಸ್ಟ್ಯಾಂಡ್‌ನಲ್ಲಿದ್ದ ರಕ್ತದ ಮಡು..! ಬಯಲಾಯ್ತು ಕಾರಣ – ಸಾರ್ವಜನಿಕರ ಆತಂಕಕ್ಕೆ ತೆರೆ..!
ವಿಟ್ಲ: ಪುತ್ತೂರು ರಸ್ತೆಯ ಬದನಾಜೆ ಸಾರ್ವಜನಿಕರ ಬಸ್ಸು ತಂಗುದಾಣದಲ್ಲಿ ರಕ್ತದ ಮಡು ಪತ್ತೆಯಾಗಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಈ ಘಟನೆಗೆ ಈಗ ತೆರೆ ಬಿದ್ದಿದೆ. ವ್ಯಕ್ತಿಯೋರ್ವರು ಕುಡಿದ ಮತ್ತಿನಲ್ಲಿ ಬಿದ್ದು ಆಗಿರುವ ಘಟನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ ಬೆಳಕಿಗೆಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಂಝನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ. ನೆಲ್ಲಿಗುಡ್ಡೆ ಮೂಲದ ವ್ಯಕ್ತಿಯಾಗಿರುವ ಹಂಝ ಕುಡಿತದ ಮತ್ತಿನಲ್ಲಿ ಬದನಾಜೆ ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದರು.
ಕುಡುಕ ನೆಲ್ಲಿಗುಡ್ಡೆಯ ಹಂಝ ಸೃಷ್ಟಿಸಿದ ಆವಾಂತರ: ಕುಡುಕ ನೆಲ್ಲಿಗುಡ್ಡೆಯ ಹಂಝ ಕೆಳಗೆ ಬಿದ್ದು ಮುಖ ಹಾಗೂ ಮೂಗಿನ ಭಾಗಕ್ಕೆ ಗಾಯವಾಗಿದ್ದು, ಆ ಗಾಯದಿಂದ ರಕ್ತ ಹೊರಬಂದಿತ್ತೆನ್ನಲಾಗಿದೆ. ರಕ್ತವನ್ನು ಕಂಡ ಆತ ಬೆಳಗ್ಗಿನ ವೇಳೆ ಅಲ್ಲಿಂದ ಎದ್ದು ವಿಟ್ಲ ಕಡೆಗೆ ತೆರಳಿದ್ದು ವಿಟ್ಲ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ. ಈ ಮೂಲಕ ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಂತಾಗಿದೆ.