ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ
ಗುವಾಹಟಿ: ಶಿವಸೇನೆಯ ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ಅವರು ನಾಳೆ ಮುಂಬೈಗೆ ಬರುವುದಾಗಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಗುವಾಹಟಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಳೆದ ಒಂದು ವಾರದಿಂದ ನಗರದ ಪಂಚತಾರಾ ಹೋಟೆಲ್‍ನಲ್ಲಿ ತಂಗಿರುವ ಶಿಂಧೆ ಹಾಗೂ ಕೆಲವು ಬಂಡಾಯ ಶಾಸಕರೊಂದಿಗೆ ಗುವಾಹಟಿಯ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗಾಗಿ ನಾಳೆ ಮುಂಬೈಗೆ ತೆರಳಲಿದ್ದೇನೆ. ಬಾಳಾ ಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
ಕಳೆದೆರಡು ವಾರಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಕ್ಕೆ ಕೊನೆಗೂ ತೆರೆಬಿದ್ದಿದೆ. ನಿನ್ನೆ ರಾತ್ರಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಭೇಟಿಯಾಗಿದ್ದರು. ರಾಜ್ಯದಲ್ಲಿ ರಾಜಕೀಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು 39 ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದಾರೆ.
ಒಂಭತ್ತು ಮಂದಿ ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿದ್ದು, ತಾವು ಮಧ್ಯಪ್ರವೇಶ ಮಾಡಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿಶ್ವಾಸಮತ ಯಾಚನೆ ಮಾಡಲು ನಿರ್ದೇಶಿಸುವಂತೆ ಗವರ್ನರ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ಬಂಡಾಯ ಶಾಸಕರು ಮುಂಬೈಗೆ ಬರಲಿದ್ದಾರೆ.
ನಿನ್ನೆ ದೆಹಲಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಜೊತೆ ಫಡ್ನವಿಸ್ ಸಭೆ ಬಳಿಕ ಮಹತ್ವದ ಬೆಳವಣಿಗೆಗಳು ನಡೆದಿದೆ. ಪಕ್ಷೇತರ ಶಾಸಕರ ಇಮೇಲ್ ಮತ್ತು ಬಿಜೆಪಿ ನಾಯಕರ ಮನವಿ ಹಿನ್ನೆಲೆ ಅಧಿಕೃತವಾಗಿ ರಾಜ್ಯಪಾಲರು ಅಖಾಡಕ್ಕೆ ಇಳಿಯಲಿದ್ದು, ಸಿಎಂ ಉದ್ದವ್ ಠಾಕ್ರೆಗೆ ಶೀಘ್ರವೇ ಬಹುಮತ ಸಾಬೀತು ಮಾಡುವಂತೆ ಸೂಚನೆ ನೀಡಲಿದ್ದಾರೆ. ರಾಜ್ಯಪಾಲರು ವಿಶ್ವಾಸಮತ ಸಾಬೀತಿಗೆ ತಿಳಿಸಿದರೆ ಠಾಕ್ರೆ ಸರ್ಕಾರ ಬಹುತೇಕ ಪತನವಾಗುತ ಸಾಧ್ಯತೆ ಇದೆ.