Published On: Tue, Jun 28th, 2022

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರು ಜೀವನ ಚರಿತ್ರೆಗೆ ಕತ್ತರಿ: ಸಚಿವ ಕೋಟ, ಸುನಿಲ್ ಕುಮಾರ್ ಮೌನ: ಬಿಲ್ಲವ ಸಮುದಾಯ ಆರೋಪ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಜೂ.23ರಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು.23btl-Billava

ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಸಮಾಜ ಸುಧಾರಕ, ಹಿಂದುಳಿದ ವರ್ಗ ಸಮುದಾಯಗಳ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಗೆ ಹತ್ತನೇ ತರಗತಿ ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಬಗ್ಗೆ ಜಿಲ್ಲೆಯ ಬಿಲ್ಲವ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಮೌನವಾಗಿದ್ದಾರೆ ಎಂದು ಬಿಲ್ಲವ-ಆರ್ಯ-ಈಡಿಗ ಮಹಾ ಸಂಸ್ಥಾನ ಸೇಲೂರು ಇದರ ಬಂಟ್ವಾಳ ತಾಲ್ಲೂಕು ಘಟಕ ಅಧ್ಯಕ್ಷ ಬೇಬಿ ಕುಂದರ್ ಆರೋಪಿಸಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೌನ ಮುರಿದು ಸರ್ಕಾರದ ಕಣ್ಣು ತೆರೆಸಬೇಕು ಎಂದರು.

ಕೇರಳ ರಾಜ್ಯವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಶೈಕ್ಷಣಿಕ ಕ್ರಾಂತಿಗೆ ಕಾರಣೀಕರ್ತ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ ಸಮಾಜ ವಿಜ್ಞಾನ ಪಠ್ಯದಿಂದ ಕನ್ನಡ ಪಠ್ಯಕ್ಕೆ ಸೇರ್ಪಡೆಗೊಳಿಸುವ ಮೂಲಕ ಸರ್ಕಾರ ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ನಡೆಸಿದೆ ಎಂದು ಟೀಕಿಸಿದರು.

ಈಗಾಗಲೇ ಭಗತ್ ಸಿಂಗ್, ಬಸವಣ್ಣ, ಕುವೆಂಪು, ಅಂಬೇಡ್ಕರ್ ಜೀವನ ಚರಿತ್ರೆ ಪಠ್ಯದಲ್ಲಿ ಉಂಟಾದ ಲೋಪ -ದೋಷಗಳ ಬಗ್ಗೆ ಹಲವು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಹೋರಾಟ ಮತ್ತು ಎಚ್ಚರಿಕೆಗೆ ಸರ್ಕಾರ ಮಣಿದು ಪಠ್ಯಪರಿಷ್ಕರಣಾ ಸಮಿತಿ ವಿಸರ್ಜಿಸಿರುವುದು ತಪ್ಪು ಒಪ್ಪಿಕೊಂಡಂತಾಗಿದೆ. ಇದೀಗ ಬ್ರಹ್ಮಶ್ರೀ ನಾರಾಯಣಗುರುಗಳ ಬಗ್ಗೆ ಪಠ್ಯದಲ್ಲಿ ಮತ್ತೆ ಸೇರ್ಪಡೆಗೊಳಿಸದಿದ್ದಲ್ಲಿ ಈಡಿಗರು ಮಾತ್ರವಲ್ಲದೆ ನಾಮಧಾರಿ ಸಹಿತ ೨೬ ಪಂಗಡ ಒಟ್ಟುಗೂಡಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಇದೇ ೨೫ರಂದು ಮಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಪ್ರಮುಖರ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ, ಜಗದೀಶ್ ಕೊಯಿಲ, ದಿನೇಶ್ ಸುಂದರ ಶಾಂತಿ, ಸುಂದರ ಪೂಜಾರಿ, ರಂಜಿತ್ ಪೂಜಾರಿ, ನಾರಾಯಣ ಸಾಲ್ಯಾನ್, ಲೋಕೇಶ್ ಸುವರ್ಣ, ಅಶೋಕ ಪೂಜಾರಿ, ಪ್ರೇಮನಾಥ್, ಜಯಂತಿ ಪೂಜಾರಿ, ಶೈಲಜಾ ರಾಜೇಶ್ ಪೂಜಾರಿ ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter