‘ಸರ್ಕಾರಿ ಸೇವೆಗಳ ಆಯ್ದ ಉಚಿತ ಶಿಬಿರ’ ಉದ್ಘಾಟನೆ
ಕೈಕಂಬ : ಬಿಜೆಪಿ ರಾಜಕೀಯದಲ್ಲಿ ಪಕ್ಷ ಸಂಘಟನೆ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಅವುಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಒಳಗೊಂಡಿದೆ. ಸರ್ಕಾರಿ ಸೇವೆಗಳು ಸುಲಭವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಪಕ್ಷವು ಇಂತಹ ಬಹುಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ವಾಮಂಜೂರು ನಗರ ಉತ್ತರ ಮಂಡಲದ ಮನಪಾ ತಿರುವೈಲು ೨೦ನೇ ವಾರ್ಡ್ ನ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಮುಂದಾಳತ್ವದಲ್ಲಿ ಶ್ರೀ ರಾಮ ಭಜನಾ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ ‘ಸರ್ಕಾರಿ ಸೇವೆಗಳ ಆಯ್ದ ಉಚಿತ ಶಿಬಿರ’ ಉದ್ಘಾಟಿಸಿ ಮಾತನಾಡಿದ ಶಾಸಕರು, ಎಲ್ಲರಿಗೂ ಸರ್ಕಾರಿ ಸೇವೆಗಳ ಬಗ್ಗೆ ಅರಿವು ಇರಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಮಾಹಿತಿ ಕಾರ್ಯಕ್ರಮವಾಗಬೇಕು. ಭ್ರಷ್ಟಾಚಾರ ಮುಕ್ತ ಭಾರತದ ಕನಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಸವಲತ್ತುಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪುವಂತೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿ, ಕಳೆದ ೮ ವರ್ಷದಿಂದ ಈ ದೇಶದ ಪ್ರಧಾನಿಯಾಗಿ ಎಲ್ಲ ಸ್ತರಗಳಲ್ಲಿ ಆಮೂಲಾಗ್ರ ಬದಲಾವಣೆ ಪ್ರಯತ್ನಿಸುತ್ತಿರುವ ಮೋದಿಯವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೇವೆ-ಸವಲತ್ತು ತಲುಪಬೇಕೆಂಬ ಕನಸು ಕಂಡಿದ್ದಾರೆ ಎಂದರು.
ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್ ಮಾತನಾಡಿ, ಶಿಬಿರದ ಬಗ್ಗೆ ಮಾಹಿತಿ ನೀಡುತ್ತ, ಪಕ್ಷವು ಆಯೋಜಿಸಿದ ಈ ಉಚಿತ ಸೇವಾ ಶಿಬಿರ ಸಾರ್ವಜನಿಕರಿಂದ ಸದುಪಯೋಗವಾಗಲಿ. ಪ್ರಸಕ್ತ ಸಾಲಿನಲ್ಲಿ ತಿರುವೈಲು ವಾರ್ಡ್ನಲ್ಲಿ ೨೦ ಕೋ. ರೂ.ಗೂ ಅಧಿಕ ಅನುದಾನದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಗುರುಪುರ ವ್ಯ.ಸೇ.ಸ.ಸಂಘ(ನಿ) ಇದರ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಸಂಘದ ನಿರ್ದೇಶಕ ಶ್ರೀನಿವಾಸ ಮಲ್ಲೂರು, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆಪಿ), ಶಕ್ತಿ ಕೇಂದ್ರ ಪ್ರಮುಖರಾದ ಸುರೇಂದ್ರ, ಯಶವಂತ ಪೂಜಾರಿ, ಎಸ್‌ಸಿ ಮೋರ್ಚಾ ಮುಖಂಡ ರಾಮ ಮುಗ್ರೋಡಿ, ಬಿಜೆಪಿ ಮುಖಂಡ ಅನಿಲ್ ರೈ ವಾಮಂಜೂರು, ಉದ್ಯಮಿ ರಘು ಸಾಲ್ಯಾನ್, ಬಿಜೆಪಿ ಪ್ರಮುಖರು, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಕಾವೂರು ೨ರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿಗಾರ ಸ್ವಾಗತಿಸಿದರೆ, ಬಿಜೆಪಿ ಮಂಡಲ ಎಸ್‌ಸಿ ಮೋರ್ಚಾದ ಮಾಜಿ ಅಧ್ಯಕ್ಷ ಉಮೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ೪ ಬೂತ್‌ಗಳ ಅಧ್ಯಕ್ಷರು ಹಾಗೂ ಶಿಬಿರ ವ್ಯವಸ್ಥೆಗೊಳಿಸಿದ ಸಂದೀಪ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಶಿಬಿರದಿಂದ ನೂರಾರು ನಾಗರಿಕರು ಆಧಾರ್ ಕಾರ್ಡ್ ತಿದ್ದುಪಡಿ, ವಿಧವಾ ವೇತನ ಹಾಗೂ ಅಂಗವಿಲಕರ ವೇತನಕ್ಕ ಅರ್ಜಿ, ಈ-ಶ್ರಮ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಅರ್ಜಿ, ಮತದಾರರ ಚೀಟಿ ಅರ್ಜಿ ಮತ್ತು ತಿದ್ದುಪಡಿ, ಕಟ್ಟಡ ಕಾರ್ಮಿಕರ ಗುರುತಿನ ಚೀಟಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿಸಿಕೊಂಡರು.