ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲೇ ಸಾವು
ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಸಮೀಪದ ಸೋರ್ನಾಡು ಎಂಬಲ್ಲಿ ಜೂ.14ರಂದು ಮಂಗಳವಾರ ಸಂಜೆ ವೇಳೆ ಲಾರಿ ಢಿಕ್ಕಿ ಹೊಡೆದು ದ್ವಿಚಕ್ರ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಲೊರೆಟ್ಟೋ ಕುಪ್ರಾಡಿ ಕೃಷ್ಣಪ್ಪ ಪೂಜಾರಿ ಹಾಗೂ ಲಕ್ಷ್ಮೀ ದಂಪತಿಗಳ ಪ್ರಥಮ ಪುತ್ರ ನಿತೇಶ್ ಹಾಗೂ ಮತ್ತೊಬ್ಬ ಜಕ್ರಿಬೆಟ್ಟು ನಿವಾಸಿ ಶಶಿರಾಜ್ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ಶಶಿರಾಜ್ ಪಿಕಪ್ ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದರು. ಸಿದ್ದಕಟ್ಟೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ಬಿಸಿರೋಡಿನಿಂದ ಕಾರ್ಕಳಕ್ಕೆ ಅತೀ ವೇಗದಿಂದ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿ ನೇರವಾಗಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದ್ದು, ಬೈಕಿನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಜಾಗರೂಕತೆಯಿಂದ ಹಾಗೂ ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿ ಚಾಲಕನೇ ಅಪಘಾತಕ್ಕೆ ಕಾರಣವಾಗಿದ್ದು, ಇಬ್ಬರ ಸಾವಿಗೆ ಈತನೇ ನೇರ ಹೊಣೆಯಾಗಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಪಘಾತ ನಡೆಸಿ ಲಾರಿ ಚಾಲಕ ಲಾರಿ ನಿಲ್ಲಿಸದೆ ಓಡಿ ಹೋಗಲು ಪ್ರಯತ್ನ ಮಾಡಿದ್ದಾನೆ. ಆದರೆ ಸ್ಥಳೀಯರು ಬೆನ್ನಿಟ್ಟಿ ಸಿದ್ದಕಟ್ಟೆ ಸಮೀಪದ ಕುದ್ರೋಳಿ ಎಂಬಲ್ಲಿ ಟಿಪ್ಪರ್ ಲಾರಿಗೆ ಅಡ್ಡ ಇಟ್ಟು ಲಾರಿ ನಿಲ್ಲಿಸಿ ಆತನ ವಿರುದ್ಧ ಹರಿಹಾಯ್ದಿದ್ದಿದ್ದಾರೆ.