ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ನಾರಿ ಸಮ್ಮಾನ ದೇಶದ ಅಭಿಮಾನ’ ಮಹಿಳಾ ಸಮಾವೇಶದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಖಂಡ ಸಿ.ಟಿ.ರವಿ, ಶಾಸಕ ರಾಜೇಶ ನಾಯ್ಕ್ ಮತ್ತಿತರರು ಇದ್ದಾರೆ.
ದೇಶದಲ್ಲಿ ಹಂತ ಹಂತವಾಗಿ ಬೆಳೆದು ಬಂದಿರುವ ಕಾರ್ಯಕರ್ತರ ಪಕ್ಷ ಬಿಜೆಪಿ ಪ್ರತೀ ಹಂತದಲ್ಲಿಯೂ ದೇಶಕ್ಕೆ ಜೈಕಾರ ಹಾಕುತ್ತಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಮತ್ತಿತರ ಹಲವು ಪಕ್ಷಗಳಲ್ಲಿ ಇಂದಿಗೂ ವಂಶಾಡಳಿತಕ್ಕೆ ಜೈಕಾರ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. ಇಲ್ಲಿನ ಬಿ.ಸಿ.ರೋಡಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ೮ ವರ್ಷಗಳ ಆಡಳಿತಾವಧಿ ಪೂರ್ಣಗೊಂಡ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ನಾರಿ ಸಮ್ಮಾನ ದೇಶದ ಅಭಿಮಾನ’ ಮಹಿಳಾ ಸಮಾವೇಶದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ವಂಶಾಡಳಿತ ಪಿಡುಗು ಜಮ್ಮು-ಕಾಶ್ಮೀರದಿಂದ ಹಿಡಿದು, ಉತ್ತರಪ್ರದೇಶ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರಪ್ರದೇಶ, ಕರ್ನಾಟಕತನಕವೂ ಇದೆ. ಆದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹಿತ ಜಗತ್ತಿನ ಬಲಿಷ್ಟ ನಾಯಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಜೋಡಿ ಎಂದಿಗೂ ತನ್ನ ವಂಶಾಡಳಿತಕ್ಕೆ ಅವಕಾಶ ನೀಡಿಲ್ಲ ಎಂದರು. ಕಳೆದ ೬೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಆಕಾಶ, ಭೂಮಿ ಮತ್ತು ಪಾತಾಳದಲ್ಲಿಯೂ ಹಗರಣ ನಡೆಸಿದೆ ಎಂದರು. ಅಧಿಕಾರ ಕಳೆದುಕೊಂಡ ಜಾತಿವಾದಿ ಮತ್ತು ಕೋಮುವಾದಿ ಹುಚ್ಚು ಹಿಡಿದ ಗುಲಾಮಗಿರಿಗಳು ಅಶಾಂತಿಗೆ ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಅನಗತ್ಯ ಬಾಲ ಬಿಚ್ಚಿ ಶಾಂತಿ ಕದಡಿದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅವರ ‘ಬುಲ್ಡೋಜರ್ ಮಾದರಿ’ ಇಲ್ಲಿಗೂ ತರಲು ಗೊತ್ತಿದೆ ಎಂದು ಅವರು ಎಚ್ಚರಿಸಿದರು.
ದೇಶದಲ್ಲಿ ಆತ್ಮನಿರ್ಭರ ಮತ್ತು ಸ್ವಾವಲಂಬನೆ ಮೂಡಿಸಿದ ಪ್ರಧಾನಿ ಮೋದಿಗೆ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಿಲುಕಿದ ಭಾರತೀಯರೊಂದಿಗೆ ಪಾಕಿಸ್ತಾನ, ಶ್ರೀಲಂಕಾ ಮತ್ತಿತರ ವಿದ್ಯಾರ್ಥಿಗಳನ್ನು ಕರೆತಂದ ಹೆಗ್ಗಳಿಕೆ ಇದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಂಟ್ವಾಳದಲ್ಲಿ ಮಹಿಳಾ ಶಕ್ತಿ ಬಲಿಷ್ಟವಾಗಿದೆ ಎಂದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಚೌಟ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಶುಭ ಹಾರೈಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಕೊರಗಪ್ಪ ನಾಯ್ಕ್, ಸುಲೋಚನಾ ಜಿ.ಕೆ.ಭಟ್, ಕಸ್ತೂರಿ ಪಂಜ, ಪೂಜಾ ಪೈ ಮತ್ತಿತರರು ಇದ್ದರು. ಸೀಮಾ ಮಾಧವ ಸ್ವಾಗತಿಸಿ, ,ಪುಷ್ಪಲತಾ ವಂದಿಸಿದರು. ಸೌಮ್ಯಲತಾ ಕಾರ್ಯಕ್ರಮ ನಿರೂಪಿಸಿದರು.
