105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI
ಮುಂಬೈ: ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ಜಿಲ್ಲೆಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಸ್ವಾಮ್ಯದ NHAI ಕೇವಲ 105 ಗಂಟೆ 33 ನಿಮಿಷಗಳಲ್ಲಿ 75 ಕಿ.ಮೀ ಉದ್ದ ಬಿಟುಮಿನಸ್ ಕಾಂಕ್ರೀಟ್ ಅನ್ನು ಹಾಕುವ ಮೂಲಕ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದೆ.
ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದು, ಹಗಲು- ರಾತ್ರಿ ಎನ್ನದೇ 720 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಜೂನ್ 3ರಂದು ಬೆಳಿಗ್ಗೆ 7:27ಕ್ಕೆ ಪ್ರಾರಂಭವಾದ ಈ ಕಾಮಗಾರಿ, ಜೂನ್ 7ರಂದು ಸಂಜೆ 5 ಗಂಟೆಗೆ ಪೂರ್ಣಗೊಂಡಿತು. ಈ 75 ಕಿ.ಮೀ ಏಕಪಥದ ಕಾಂಕ್ರೀಟ್ ರಸ್ತೆಯ ಒಟ್ಟು ಉದ್ದವು 37.5 ಕಿ.ಮೀ ದ್ವಿಪಥದ ಸುಸಜ್ಜಿತ ರಸ್ತೆಗೆ ಸಮನಾಗಿದೆ ಎಂದರು.
2019ರ ಫೆಬ್ರವರಿಯಲ್ಲಿ ಕತಾರ್‌ನ ದೋಹಾದಲ್ಲಿ ನಿರ್ಮಿಸಿದ್ದ 25.275 ಕಿ.ಮೀ ರಸ್ತೆಯು ಈ ಹಿಂದೆ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿತ್ತು. ಆಗ ಆ ರಸ್ತೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಇದೀಗ ಈ ದಾಖಲೆಯನ್ನು ಅಮರಾವತಿ ಮತ್ತು ಅಂಕೋಲಾ ರಾಷ್ಟ್ರೀಯ ಹೆದ್ದಾರಿಯೂ ಮುರಿದಿದೆ ಎಂದು ಹೇಳಿದರು.
NH 53: ಅಮರಾವತಿಯಿಂದ ಅಂಕೋಲಾ ವಿಭಾಗವು NH 53ರ ಭಾಗವಾಗಿದ್ದು, ಇದು ಕೋಲ್ಕತ್ತಾ, ರಾಯ್‍ಪುರ, ನಾಗ್‍ಪುರ ಮತ್ತು ಸೂರತ್‍ನಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಟ್ರಾಫಿಕ್ ಮತ್ತು ಸರಕು ಸಾಗಣೆಯನ್ನು ಸರಾಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.