ತಾರಿಕರಿಯದ ದ.ಕ.ಜಿ.ಪಂ ಸರ್ಕಾರಿ ಶಾಲಾ ಮಕ್ಕಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಉಚಿತ ಬರೆಯುವ ಪುಸ್ತಕ ವಿತರಣೆ
ಕೈಕಂಬ: ಗುರುಪುರ ಪಂಚಾಯತ್ ವ್ಯಾಪ್ತಿಯ ತಾರಿಕರಿಯದ ದ.ಕ.ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ವತಿಯಿಂದ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಮಾತನಾಡಿ, ಸಂಘ ನೀಡಿದ ಈ ಕೊಡುಗೆ ವಿದ್ಯಾರ್ಥಿಗಳಿಂದ ಸದುಪಯೋಗವಾಗಲಿ. ವಿದ್ಯಾವಂತರಾಗಿ, ಭವಿಷ್ಯದಲ್ಲಿ ತಮ್ಮ ಸಾಧನೆ ಮೂಲಕ ಕಲಿತ ಶಾಲೆ ಹಾಗೂ ಹೆತ್ತವರಿಗೆ ಕೀರ್ತಿ ತನ್ನಿ. ಎಲ್ಲರೂ ದೇಶದ ಉತ್ತಮ ಪ್ರಜೆಗಳಾಗಿ ಎಂದು ಹಾರೈಸಿದರು.
ಪ್ರತಿ ವರ್ಷ ಶಾಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ಒದಗಿಸುತ್ತ ಬಂದಿರುವ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿಯವರನ್ನು ಶಾಲೆಯಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ರಮಾದೇವಿ ಸ್ವಾಗತಿಸಿ, ಪ್ರಸ್ತಾವಿಸಿದರು. ಸಂಘದ ಉಪಾಧ್ಯಕ್ಷ ಶೀನ ಕೋಟ್ಯಾನ್, ನಿರ್ದೇಶಕರಾದ ಜಿ. ಎಂ ಉದಯ ಭಟ್, ಸೋಮಯ್ಯ, ನಳಿನಿ ಶೆಟ್ಟಿ, ಲತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಹರೀಶ್ ಬಳ್ಳಿ, ಶಶಿಕಲಾ, ಶಾಲಾ ಶಿಕ್ಷಕಿಯರಾದ ಪ್ರೀತಿ ಮರಿಯಾ ನೊರೊನ್ಹಾ, ಬಬಿತಾ, ಅನಿತಾ ಇದ್ದರು. ಶಿಕ್ಷಕಿ ಲಿಲ್ಲಿ ಪಿಂಟೊ ವಂದಿಸಿದರು.