ಮೀನುಗಾರರಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯ-ಅಧಿಕಾರಿಗಳಿಗೆ ಡಾ. ಭರತ್ ಶೆಟ್ಟಿ ಸೂಚನೆ
ಕೈಕಂಬ : ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯ ಪಣಂಬೂರು, ಮೀನಕಳಿಯ, ಚಿತ್ರಾಪುರ, ಸುರತ್ಕಲ್ ಕಡಲ ತೀರದಲ್ಲಿರುವ ಮೀನುಗಾರ ಸಮುದಾಯ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನವಮಂಗಳೂರು ಬಂದರು ನಿರ್ವಸಿತ ಮೋಗವೀರ ನಾಲ್ಕು ಪಟ್ಣ ಸಂಯುಕ್ತ ಸಭಾ(ರಿ) ಇದರ ಸಹಭಾಗಿತ್ವದಲ್ಲಿ ನಡೆಯಲಿರುವ ಒಂದು ದಿನದ ಮಾಹಿತಿ ಮತ್ತು ನೋಂದಣಿ ಶಿಬಿರ ಆಯೋಜನೆ ಬಗ್ಗೆ ಜೂ.07ರಂದು ಮಂಗಳವಾರ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.
ವಿವಿಧ ಇಲಾಖೆಗಳಿಂದ ನಾಗರಿಕರಿಗೆ ಲಭ್ಯವಿರುವ ಸೌಲಭ್ಯಗಳು ಹಾಗೂ ನೀಡಬೇಕಿರುವ ಅಗತ್ಯ ಮಾಹಿತಿಗಳ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಯೋಜನೆಗಳು ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಮಂಗಳೂರು ನಗರ ಪಾಲಿಕೆ ಕಟ್ಟಡದಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸುರತ್ಕಲ್ ಹೋಬಳಿ ಉಪ-ತಹಶೀಲ್ದಾರ್, ಮೀನುಗಾರಿಕಾ ಸಹಾಯಕ ನಿರ್ದೇಶಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಯುವಜನ ಸೇವಾ ಕ್ರೀಡಾ ಇಲಾಖೆ, ಕಾರ್ಮಿಕ ಇಲಾಖೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.