ಕೈಕಂಬ : ಗ್ರಾಮೀಣ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಹಾಗೂ ಸ್ಥಳದಲ್ಲೇ ಉತ್ತರ ನೀಡುವ(ಡೀಸಿಯವರ) ಗ್ರಾಮ ವಾಸ್ತವ್ಯಕ್ಕೆ ಹೆಚ್ಚು ಮಹತ್ವ ಇದೆ. ಇಂತಹ ಕಾರ್ಯಕ್ರಮಗಳ ಸದ್ಬಳಕೆಯಾಗಬೇಕು. ನಾಗರಿಕರ ಸಮಸ್ಯೆಗಳಿಗೆ ಸುಲಭ ರೂಪದಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಹೇಳಿದರು.
ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮೊಗರು ಗ್ರಾಮದ ಕುಕ್ಕಟ್ಟೆಯ ಖಾಸಗಿ ಸಭಾಗೃಹದಲ್ಲಿ ಶುಕ್ರವಾರ ಆಯೋಜಿಸಲಾದ ‘ಡೀಸಿ ಗ್ರಾಮ ವಾಸ್ತವ್ಯ’ ಕಾರ್ಯಕ್ರಮವನ್ನುದ್ದೇಶಿಸಿ ಜಿಲ್ಲಾಧಿಕಾರಿಯವರು ಮಾತನಾಡಿದರು.
ಮೊಗರು ಗ್ರಾಮ :
ಮೊಗರು ಗ್ರಾಮದ ಒಟ್ಟು ಜನಸಂಖ್ಯೆ ೨೭೯೭ ಆಗಿದ್ದು, ಇಲ್ಲಿ ೫೪೯.೩೨ ಎಕ್ರೆ ಕೃಷಿ ಭೂಮಿ ಇದೆ. ಗ್ರಾಮದ ವಿಸ್ತೀರ್ಣ ೧೧೩೧.೭೫ ಎಕ್ರೆ. ೨೯೬ ಮಂದಿ ಸಂಧ್ಯಾ ಸುರಕ್ಷಾ ಆ ಯೊಜನೆ, ೭ ಮಂದಿ ವೃದ್ಧಾಪ್ಯ ವೇತನದಾರರು, ೧೦೨ ವಿಧವಾ ವೇತನದಾರರು, ೩೪ ಭಿನ್ನಚೇತನರು, ಮೂವರು ಮನಸ್ವಿನಿ ವೇತನದಾರರು…ಹೀಗೆ ಒಟ್ಟು ೪೪೨ ಮಂದಿ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ.
ಪಿಂಚಣಿದಾರರ ಪಟ್ಟಿಯಲ್ಲಿ ಮೊಗರು ಗ್ರಾಮದಲ್ಲಿ ಕೇವಲ ೭ ಮಂದಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಡೀಸಿಯವರು, ಒಂದು ಗ್ರಾಮದಲ್ಲಿ ಬರೇ ೭ ಮಂದಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ ಎಂದರೆ ನಂಬಲು ಸಾಧ್ಯವಿದೆಯೇ ಎಂದು ಗಂಜಿಮಠ ಪಿಡಿಒ ಸಹಿತ ಕಂದಾಯ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವೃದ್ಧಾಪ್ಯ ವೇತನ ಹಾಗೂ ಸರ್ಕಾರ ಇತರ ಯೋಜನೆಗಳಿಗೆ ಸಂಬAಧಿಸಿದAತೆ ಗ್ರಾಮದಲ್ಲಿ ಮನೆಮನೆಗಳಿಗೆ ತೆರಳಿ ಮಾಹಿತಿ ನೀಡಬೇಕು ಹಾಗೂ ಅರ್ಹರನ್ನು ಹುಡುಕಿ ಫಲಾನುಭವಿಗಳ ಯಾದಿಯಲ್ಲಿ ಸೇರಿಸಿಕೊಳ್ಳುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಹೀಗಿದ್ದರೆ ಮಾತ್ರ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಲಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ಹಲವರು ರಸ್ತೆ, ವಿದ್ಯುತ್ ಸಂಪರ್ಕ, ಹಕ್ಕುಪತ್ರ, ಅಕ್ರಮ-ಸಕ್ರಮ, ನಿವೇಶನ ಹಂಚಿಕೆ ವಿಷಯದಲ್ಲಿ ಡೀಸಿಯವರಿಗೆ ದೂರು ನೀಡಿದರು. ಕೆಲವು ದೂರುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಯತ್ನಿಸಿದ ಡೀಸಿಯವರು, ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಗುರುಪುರ-ಕೈಕಂಬ ನಾಡ ಕಚೇರಿಯ ಉಪ-ತಹಶೀಲ್ದಾರ್ ಶಿವಪ್ರಸಾದ್ ನಿರೂಪಿಸಿದರು. ಸಹಾಯಕ ಆಯುಕ್ತ ಮದನ್ ಮೋಹನ್, ಜಿಪಂ ಸಿಇಒ ಡಾ. ಕುಮಾರ್, ತಾಪಂ ಇಒ ನಾಗರಾಜ್, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷೆ ಕುಮುದಾ ನಾಯ್ಕ್, ವಿವಿಧ ಇಲಾಖಾ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ವಾಸ್ತವ್ಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಗ್ರಾಮವಾಸಿಗಳು ಆಗಮಿಸಿದ್ದರು. ಡೀಸಿಯವರು ಶುಕ್ರವಾರ ಮೊಗರು ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದು, ಅವರೊಂದಿಗೆ ಇನ್ನುಳಿದ ಕೆಲವು ಉನ್ನತಾಧಿಕಾರಿಗಳು ಇರುವರು.
