Published On: Fri, May 20th, 2022

ಬಂಟ್ವಾಳ: ೨೧ರಂದು ‘ವಿಶ್ವಕರ್ಮ ಯಜ್ಞ’, ವಿಶ್ವಕರ್ಮ ಸಭಾಭವನ ಲೋಕಾರ್ಪಣೆ

ಬಂಟ್ವಾಳ: ತಾಲ್ಲೂಕಿನ ಅಜೆಕಲ ಎಂಬಲ್ಲಿ ರೂ ೩ ಕೋಟಿ ವೆಚ್ಚದಲ್ಲಿ ‘ವಿಶ್ವಕರ್ಮ ಸಭಾಭವನ’ ನಿರ್ಮಾಣಗೊಂಡಿದೆ. ಇಲ್ಲಿನ ಬಿ.ಸಿ.ರೋಡು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ನಡುವಿನ ಅಜೆಕಲ ಎಂಬಲ್ಲಿ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ರೂ ೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ೧ ಸಾವಿರ ಮಂದಿ ಸಾಮರ್ಥ್ಯದ ‘ವಿಶ್ವಕರ್ಮ ಸಭಾಭವನ’ ಲೋಕಾರ್ಪಣೆ ಮತ್ತು ‘ವಿಶ್ವಕರ್ಮ ಯಜ್ಞ’ ಕಾರ್ಯಕ್ರಮ ಇದೇ ೨೧ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ತಿಳಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ರೂ ೭೫ಲಕ್ಷ, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ರೂ ೨೫ಲಕ್ಷ ಮೊತ್ತದ ಅನುದಾನ ಸರ್ಕಾರದಿಂದ ದೊರಕಿಸಿ ಕೊಟ್ಟಿದ್ದಾರೆ. ಉಳಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ರೂ ೧ಲಕ್ಷ, ಚಂದ್ರಪ್ರಕಾಶ ಶೆಟ್ಟಿ ರೂ ೧ಲಕ್ಷ ಅನುದಾನ ಒದಗಿಸಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ರೂ ೨೫ಲಕ್ಷ ಅನುದಾನ ನೀಡುವ ಭರವಸೆ ಸಿಕ್ಕಿದೆ ಎಂದರು.

ಇದೇ ೨೦ರಂದು ರಾತ್ರಿ ವಾಸ್ತುಪೂಜೆ ನಡೆಯಲಿದ್ದು, ೨೧ರಂದು ಮುಂಜಾನೆ ವಿಶ್ವಕರ್ಮ ಯಜ್ಞ ಆರಂಭಗೊಳ್ಳಲಿದೆ. ಬೆಳಿಗ್ಗೆ ೮ಗಂಟೆಗೆ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಮತ್ತು ಹಾಸನ ಆರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಇವರನ್ನು ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ಗುರು ಮುಖ್ಯವೃತ್ತ ಬಳಿಯಿಂದ ಮೆರವಣಿಗೆಯಲ್ಲಿ ಕರೆ ತರಲಾಗುವುದು. ಜಿಲ್ಲಾ ಉಸ್ತವಾರಿ ಸಚಿವ ವಿ.ಸುನಿಲ್ ಕುಮಾರ್ , ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಇದೇ ವೇಳೆ ಸಾಧಕರಿಗೆ ಸನ್ಮಾನ ಮತ್ತು ಗಾನವೈಭವ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ೨೨ರಂದು ಬೆಳಿಗ್ಗೆ ೧೦ ಗಂಟೆಗೆ ಧಾರ್ಮಿಕ ಸಭೆ ಮತ್ತು ಸಂಜೆ ೪ ಗಂಟೆಗೆ ‘ಶ್ರೀರಾಮಾಯಣ ದರ್ಶನಂ’ ಪ್ರದರ್ಶನಗೊಳ್ಳಲಿದೆ. ಮುಂದಿನ ದಿನಗಳಲ್ಲಿ ವಿದ್ಯಾಸಂಸ್ಥೆ ಸಹಿತ ಹಾಸ್ಟೆಲ್ ನಿರ್ಮಿಸುವ ಯೋಚನೆ ಇದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಟ್ಟಡ ಸಮಿತಿ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಪದಾಧಿಕಾರಿ ಸಂದೀಪ್ ಬಿ.ಆಚಾರ್ಯ, ಜಯಚಂದ್ರ ಆಚಾರ್ಯ ಸರಪಾಡಿ, ಸುನಿಲ್ ಬಿ.ಆಚಾರ್ಯ, ಶಶಿಧರ ಆಚಾರ್ಯ ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter