ಬಂಟ್ವಾಳ: ತಾಲ್ಲೂಕಿನ ಕಾರಿಂಜ ಕ್ಷೇತ್ರ ಬಳಿ ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಬೆಟ್ಟದಿಂದ ಬೃಹತ್ ಗಾತ್ರದ ಒಂದು ಬಂಡೆ ಕಲ್ಲು ಮಂಗಳವಾರ ಕೆಳಗೆ ಉರುಳಿ ಬಿದ್ದಿದೆ. ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನ ಬಳಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಇಲ್ಲಿನ ಬೆಟ್ಟದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಈ ಬಂಡೆಕಲ್ಲು ಉರುಳಿ ಬಿದ್ದ ರಭಸಕ್ಕೆ ಹಲವು ಗಿಡ ಮರಗಳು ಮುರಿದು ಬಿದ್ದಿದ್ದು, ಕಾರಿಂಜ ಬೈಲು ಮತ್ತು ರಥಬೀದಿ ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಕೆಲಹೊತ್ತು ಅಡ್ಡಿಯಾಗಿದೆ. ಅರಣ್ಯ ಇಲಾಖೆ ಸಿಬಂದಿಗಳು ಬಂದಿ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರ ತೆರವುಗೊಳಿಸಿದ್ದಾರೆ.
ಮೇ.17ರಂದು ಮಂಗಳವಾರ ಬೆಳಿಗ್ಗೆ ಸುಮಾರು ೯ಗಂಟೆಗೆ ಕಾರಿಂಜೇಶ್ವರನ ಸನ್ನಿಧಿಯ ಬಲ ಭಾಗದ ಬೃಹತ್ ಬಂಡೆ ಕಲ್ಲು ಕೆಳಗೆ ಉರುಳಿ ಕೊಂಡು ಬಂದು ರಥಬೀದಿ ರಸ್ತೆ ಬದಿ ನಿಂತಿದೆ. ಕಳೆದ ವರ್ಷ ಕಾರಿಂಜೇಶ್ವರನ ಸನ್ನಿಧಿ ಎಡಭಾಗದಲ್ಲಿ ತಡೆಗೋಡೆ ಕುಸಿದು ಬಿದ್ದಿತ್ತು. ಈ ಪರಿಸರದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಮಳೆಗೆ ಮಣ್ಣು ಸಡಿಲಗೊಂಡು ಬಂಡೆ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
