ಕೈಕಂಬ : ಕೇರಳದ ಪಾಲಕ್ಕಾಡ್‌ನ ಚಿತ್ತೂರು ವ್ಯಾಸಮಠದ ಶ್ರೀ ವ್ಯಾಸಾನಂದ ಶಿವಯೋಗಿ ಗುರೂಜಿ ಅವರ ನೇತೃತ್ವದಲ್ಲಿ ಎ. ೨೯ರಿಂದ ಮೇ ೧ರವರೆಗೆ ಗುರುಪುರ ಕೈಕಂಬದ ಬಡಗುಳಿಪಾಡಿಯ ವ್ಯಾಸ ಗುರುಕುಲದಲ್ಲಿ ರಾಜ್ಯದಲ್ಲೇ ಪ್ರಥಮವೆನ್ನಲಾದ ಲೋಕ ಕಲ್ಯಾಣಾರ್ಥ ‘ರುದ್ರಾಕ್ಷ ವ್ಯಾಸ ಮಹಾಯಾಗ’ ನೆರವೇರಲಿದ್ದು, ಎ. ೧೯ರಂದು ಮಟ್ಟಿಯಲ್ಲಿ ಶ್ರೀ ವ್ಯಾಸಾನಂದ ಶಿವಯೋಗಿ ಗುರೂಜಿಯವರು ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಪ್ರಧಾನ ಸಂಚಾಲಕಿ ಮಮತಾ ಎಸ್ ಕುಂದರ್, ಸಮಿತಿ ಅಧ್ಯಕ್ಷ ಶರಣ್‌ರಾಜ್, ಡಾ. ಎಲ್ ಕೆ ಸುವರ್ಣ, ಕಮಲಾಕ್ಷ ಧನುಪೂಜೆ, ಕಿರಣ್ ಪಕ್ಕಳ ಪೆರ್ಮಂಕಿ, ದಯಾನಂದ ಪೂಜಾರಿ, ಹರೀಶ್ ಮಟ್ಟಿ ಇದ್ದರು.
ಎ. ೨೯ರಂದು ಸಂಜೆ ೪ ಗಂಟೆಗೆ ಗಂಜಿಮಠದ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕೈಕಂಬ ಮಾರ್ಗವಾಗಿ ಮಟ್ಟಿಯ ಯಾಗ ಸ್ಥಳಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ೮ಕ್ಕೆ ಪರಮಪವಿತ್ರ ಕಲಾವಿದರಿಂದ `ಶಿವ ಪುರ್ಸದ ಬಬ್ಬರ್ಯ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಎ.೩೦ರಂದು ಶನಿವಾರ ಬೆಳಿಗ್ಗೆ ಭಜನೆ ಹಾಗೂ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ ೮ರಿಂದ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮೇ ೧ರಂದು ಭಾನುವಾರ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಅತಿ ವಿಶಿಷ್ಟವೂ, ಅಪೂರ್ವವೂ ಎನ್ನಲಾದ ರುದ್ರಾಕ್ಷ ವ್ಯಾಸ ಮಹಾಯಾಗ ನಡೆಯಲಿದ್ದು, ಸಂಜೆ ೬.೨೦ಕ್ಕೆ ಯಾಗದ ಪೂರ್ಣಾಹುತಿಯಾಗಲಿದೆ. ಈ ಸಂದರ್ಭದಲ್ಲಿ ಮಹಾ ಅನ್ನ ಸಂತರ್ಪಣೆ ಜರುಗಲಿದೆ ಎಂದು ಯಾಗದ ಸಂಚಾಲಕಿ ಮಮತಾ ಕುಂದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
