ಬಂಟ್ವಾಳ: ತಾಲ್ಲೂಕಿನ ಬಡಕಬೈಲು ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಪ್ರಯುಕ್ತ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಗೆ ಕನ್ಯಾಡಿ ಶ್ರೀ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ ಇದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸುವ ಪ್ರಸಕ್ತ ಸನ್ನಿವೇಶದಲ್ಲಿ ರಾಜಕಾರಣಿಗಳಿಗೆ ಧರ್ಮದ ಮರ್ಮ ತಿಳಿಸುವ ಅಗತ್ಯವಿದ್ದು, ಆ ಮೂಲಕ ಧರ್ಮ ರಾಜಕಾರಣ ನಡೆಯಬೇಕು ಎಂದು ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಬಡಕಬೈಲು ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಪ್ರಯುಕ್ತ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನಲ್ಲಿ ಪ್ರಕೃತಿ ಆರಾಧನೆ ಜತೆಗೆ ಎಲ್ಲಾ ಜಾತಿ ಮತ್ತು ಧರ್ಮಗಳನ್ನು ಮೀರಿ ನ್ಯಾಯದಾನ ನೀಡುವ ಕೇಂದ್ರವಾಗಿ ದೈವಸ್ಥಾನ ರೂಪುಗೊಂಡಿದೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸನಾತನ ಹಿಂದೂ ಧರ್ಮದಲ್ಲಿ ಪ್ರಕೃತಿ ಆರಾಧನೆ ಸಮ್ಮಿಳಿತಗೊಂಡಿದೆ ಎಂದರು.
ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಮಂಜಯ ಶೆಟ್ಟಿ ಅಮ್ಮುಂಜೆಗುತ್ತು, ಉದ್ಯಮಿ ಜೀವನ್ ದಾಸ್ ರೈ ಮಂಗಾಜೆ, ಉಳ್ಳಾಲ ಉಳಿಯ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ ಕುತ್ತಾರ್, ಕಚ್ಚೂರು ಶ್ರೀ ಮಾಲ್ದಿದೇವಿ ದೇವಸ್ಥಾನ ಅಧ್ಯಕ್ಷ ಶಿವಪ್ಪ ನಂತೂರು, ಕರಿಯಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಟೇಶ್ ನಾವಡ, ಸಮಾಜ ಸೇವಕ ಚಂದ್ರಹಾಸ ಶೆಟ್ಟಿ ನಾರ್ಲ, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಶುಭ ಹಾರೈಸಿದರು. ಇದೇ ವೇಳೆ ದೈವನರ್ತಕ ಜನಾರ್ದನ ಮೂಡುಶೆಡ್ಡೆ ಮತ್ತು ವಾದಕ ವಾಸು ಶೇರಿಗಾರ್ ಮೂಡುಶೆಡ್ಡೆ ಇವರನ್ನು ಸನ್ಮಾನಿಸಲಾಯಿತು. ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ಬಡಕಬೈಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಿ.ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
