ಕೈಕಂಬ : ಸುಮಾರು ೫೦ ವರ್ಷಗಳ ಹಿಂದೆ ತೀರಾ ಶಿಥಿಲಾವಸ್ಥೆ ಮತ್ತು ಕೇವಲ ಕುರುಹು ಮಾತ್ರ ಪತ್ತೆಯಾದ ಸಾಕಷ್ಟು ಕ್ಷೇತ್ರಗಳು ಜಿಲ್ಲೆಯಲ್ಲಿ ಜೀರ್ಣೋದ್ಧಾರಗೊಂಡಿದೆ. ಅದೇ ರೀತಿ ಫಲ್ಗುಣಿ ನದಿ ತೀರದಲ್ಲಿ ಈ ದೇವಳ ಬೆಳಗುತ್ತಿದೆ. ಧಾರ್ಮಿಕತೆಯಿಂದ ಶಕ್ತಿವಂತ ಮತ್ತು ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಇಲ್ಲಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಾಮಾಜಿಕ ಬದುಕಿಗೆ ಧರ್ಮ ಭದ್ರ ನೆಲೆ ನೀಡಿದೆ. ಇದಕ್ಕಾಗಿ ಭಾರತ ದೇವರ ಭೂಮಿ ಎಂದು ಗುರುತಿಸಿಕೊಂಡಿದೆ. ಭಕ್ತಿ ಮತ್ತು ಪ್ರೀತಿಯಿಂದ ದೇವರ ಆರಾಧನೆ ಅಗತ್ಯ ಎಂದರು.
ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಉದ್ಯಮಿ ಬಿ.ರಘುನಾಥ ಸೋಮಯಾಜಿ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಆಳ್ವ, ಪ್ರಮುಖರಾದ ದೇವಪ್ಪ ಪೂಜಾರಿ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯ ತಂತ್ರಿ ಪೊಳಲಿ, ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಆಡಳಿತ ಮೊಕ್ತೇಸರ ವಿಷ್ಣುಮೂರ್ತಿ ಭಟ್, ಸಮಿತಿ ಗೌರವಾಧ್ಯಕ್ಷ ಭಾಸ್ಕರ ರಾವ್ ಪಲ್ಲಿಪಾಡಿ ಸ್ವಾಗತಿಸಿ, ಕಾರ್ಯದರ್ಶಿ ನಾಗರಾಜ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ವಂದಿಸಿದರು. ಸತ್ಯನಾರಾಯಣ ಭಟ್ ಮತ್ತು ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಾಜು ಕೋಟ್ಯಾನ್ ಸಹಕರಿಸಿದರು.
