ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರಿನ ಕುಚ್ಚಿಗುಡ್ಡೆಯಲ್ಲಿ ದಕಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾಮಾಂತರ) ಹಾಗೂ ಗುರುಪುರ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಒಟ್ಟು ೧೫.೭೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡವನ್ನು ಬುಧವಾರ(ಫೆ. ೨) ಶಾಸಕ ಡಾ. ಭರತ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಮಾತನಾಡಿ, ಇಲ್ಲೊಂದು ಅಂಗನವಾಡಿ ನಿರ್ಮಿಸಬೇಕೆಂದು ೨೦೦೪ರಲ್ಲೇ ಇಚ್ಚಿಸಿದ್ದೆವು. ಬಹುದಿನಗಳ ಕನಸು ಈಗ ಈಡೇರಿದಂತಾಗಿದ್ದು, ಇದರಲ್ಲಿ ಜಿಪಂ ಅನುದಾನ ಹೆಚ್ಚಿದೆ ಎಂದರು.
ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಎ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಗ್ರಾಮಾಂತರ ಶೈಲಾ ಕೆ ಕಾರಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಿಡಿಪಿಒ ಜಿಪಂ ನಿಕಟಪೂರ್ವ ಸದಸ್ಯ ಯು ಪಿ ಇಬ್ರಾಹಿಂ, ಪಂಚಾಯತ್ ಸದಸ್ಯರಾದ ರಿಯಾಝ್, ಅಝ್ಮಿನ್, ಮರಿಯಮ್ಮ, ಜಕಾರಿಯಾ ಸಾಯಿಕ್, ರಾಜೇಶ್ ಸುವರ್ಣ, ಸಚಿನ್ ಅಡಪ, ಚಂಪಾ, ಎಡ್ಲಿನ್ ಡಿ’ಸೋಜ, ಪಂಚಾಯತ್ ಕಾರ್ಯದರ್ಶಿ ಅಶೋಕ್, ಕುಚ್ಚಿಗುಡ್ಡೆ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಉಷಾ, ಮಕ್ಕಳು, ಮಕ್ಕಳ ಪಾಲಕರು ಹಾಗೂ ಮತ್ತಿತರರು ಇದ್ದರು. ಪಂಚಾಯತ್ ಪಿಡಿಒ ಅಬೂಬಕ್ಕರ್ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ನೂಯಿಯ ಬೆಳ್ಳಿಬೆಟ್ಟು ದಿನೇಶ್ ಹೆಗ್ಡೆ ಮನೆ ಬಳಿ ಹಾಗೂ ನೂಯಿಯಲ್ಲಿ ತಲಾ ೫ ಲಕ್ಷ ರೂ ಅನುದಾನದ ಎರಡು ಕಾಲುಸಂಕ ಹಾಗೂ ಬಂಗ್ಲೆಗುಡ್ಡೆ ಅಣೆಬಳಿಯಲ್ಲಿ ೫ ಲಕ್ಷ ರೂ ಅನುದಾನದ ರಸ್ತೆ ಅಭಿವೃದ್ಧಿ(ಕಾಂಕ್ರೀಟ್) ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
