ಬಂಟ್ವಾಳ: ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರ ಸಂಪೂರ್ಣ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ.
ಇಲ್ಲಿನ ಪುರಸಭಾ ವ್ಯಾಪ್ತಿಯ ಮಣಿಹಳ್ಳ-ವಾಮದಪದವು ರಸ್ತೆ ನಡುವಿನ ಕಾರಣಿಕ ಪ್ರಸಿದ್ಧ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರವು ರೂ ೨.೫ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ ನವೀಕರಣಗೊಂಡು ಇದೇ ೨೧ರಿಂದ ೨೫ರತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು ೮೦೦ ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿ ಮಹಮ್ಮಾಯಿ ಅಮ್ಮನವರ ಗರ್ಭಗುಡಿ ಸಹಿತ ಗಣಪತಿ ಗುಡಿ, ಶ್ರೀ ಗುರು, ನಾಗಬ್ರಹ್ಮ, ರಕ್ತೇಶ್ವರಿ ಗುಡಿ, ಸುತ್ತುಪೌಳಿ, ಪರಿವಾರ ಶಕ್ತಿಗಳ ಸಾನಿಧ್ಯ ಪುನರ್ ನಿಮಾಣಗೊಂಡಿದೆ ಎಂದರು. ಗುಳಿಗ, ಮಹಾಮ್ಮಾಯಿ ಗುಳಿಗ, ಕಾಲಭೈರವ, ಕಲ್ಲುರ್ಟಿ, ಪಂಜುರ್ಲಿ, ಧೂಮಾವತಿ, ಬಂಟ, ಮಾಡಕೊರತಿ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ಸತ್ಯದೇವತೆ, ಸಂಕೊಲೆ ಗುಳಿಗ, ರಾಹುಗುಳಿಗ, ಕೊರಗಜ್ಜ ದೈವಗಳ ಸಾನಿಧ್ಯವೂ ಇದೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಮಾತನಾಡಿ, ಇದೇ ೨೧ರಂದು ಮಧ್ಯಾಹ್ನ ೨ಗಂಟೆಗೆ ಬಿ.ಸಿ.ರೋಡು ರಕ್ತೇಶ್ವರಿ ದೇವಿಸ್ಥಾನ ಬಳಿಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಇದೇ ೨೨ರಿಂದ ಪ್ರತಿದಿನ ಸಂಜೆ ೭ ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು ಎಂದರು.
ಆರ್ಥಿಕ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಮಾನಾಥ ಕೋಟ್ಯಾನ್, ಹರೀಶ ಪೂಂಜ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಕೋಶಾಧಿಕಾರಿ ಜಯಶಂಕರ ಕಾನ್ಸಾಲೆ, ಕೇಶವ ಪೂಜಾರಿ ಅಸಲ್ದೋಡಿ ಮತ್ತಿತರರು ಇದ್ದರು.
