ಕೈಕಂಬ : ಗುರುಪುರ ಗೋಳಿದಡಿಗುತ್ತಿನ “ಗುತ್ತುದ ವರ್ಷದ ಪರ್ಬೊ”ದ ಎರಡನೇ ಹಾಗೂ ಕೊನೆಯ ದಿನವಾದ ಜ. ೧೯ರಂದು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದರ ಮಾರ್ಗದರ್ಶನ ಹಾಗೂ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಶ್ರೀ ರುದ್ರಹೋಮ, ಶ್ರೀ ಚಂಡಿಕಾಹೋಮ-ಪೂರ್ಣಾಹುತಿ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಬಳಿಕ ಗುತ್ತಿನ ಚಾವಡಿಯಲ್ಲಿ ಗೋಳಿದಡಿಗುತ್ತಿನ ಚಾವಡಿ ಮಿತ್ರರಾದ ಸಾಕ್ಷಿö್ಯ ಕರ್ಕೇರ(ಗಿಟಾರ್), ಲತೀಶ್ ಕರ್ಕೇರ(ತಮಟೆ) ಮತ್ತು ಸುಮಿತಾ ಕರ್ಕೇರ(ತಾಳ) ಇವರು ಸಾದರಪಡಿಸಿದ ಭಜನಾ ಸಂಕೀರ್ತನೆಗೆ ಹರಿಪ್ರಸಾದ್ ಶೆಟ್ಟಿ(ರಿದಮ್ ಪ್ಯಾಡ್), ಜಯಕರ ಪಂಡಿತ್(ತಬಲ) ಹಾಗೂ ಚಿರಾಯು ಆಚಾರ್ಯ(ಡೋಲಕ್) ಸಹಕರಿಸಿದರು.

ಎರಡನೇ ದಿನವೂ ನೂರಾರು ಹೆಂಗಳೆಯರು ಸಾಂಪ್ರದಾಯಿಕ ಗಾಜಿನ ಬಳೆ ತೊಡಿಸಿಕೊಂಡರೆ, ಭಕ್ತಾದಿಗಳೆಲ್ಲ ಅನ್ನಪ್ರಸಾದದೊಂದಿಗೆ ಪ್ರಸಾದ ರೂಪವಾಗಿ ಕಲ್ಲಂಗಡಿ ಸ್ವೀಕರಿಸಿದರು. ಸಂಜೆ ೪ರಿಂದ ಪಾವಂಜೆ ಮೇಳದವರಿಂದ `ರಾಜಾ ಕಾಕತೀಯ’ ಕಾಲಮಿತಿ ಯಕ್ಷಗಾನ ಬಲಯಲಾಟ ಪ್ರದರ್ಶನಗೊಂಡಿತು.

