ಪಡುಪೆರಾರ ಪಂಚಾಯತ್‌ನಲ್ಲಿ ಡಿಜಿಟಲ್ ಗ್ರಂಥಾಲಯ, ಸಭಾಭವನದ ನೂತನ ವ್ಯವಸ್ಥೆ ಉದ್ಘಾಟನೆ
ಕೈಕಂಬ : ಹಿಂದಿನ ಆಡಳಿತವು ಪಡುಪೆರಾರ ಪಂಚಾಯತ್ ವ್ಯಾಪ್ತಿಯಲ್ಲಿ ಜನಪರ ಕೆಲಸಗಳಿಗೆ ಆದ್ಯತೆ ನೀಡಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಇಲ್ಲಿ ಈಗಾಗಲೇ ಒಂದು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದರೆ, ಸೀಎಂ ಜೊತೆ ಮಾತುಕತೆ ನಡೆಸಿ ಇಲ್ಲಿಗೆ ಇನ್ನೂ ಒಂದು ಕೋಟಿ ರೂ ಅನುದಾನ ತಂದು ಅಭಿವೃದ್ಧಿ ಕೆಲಸ ನಡೆಸಲಿದ್ದೇನೆ. ನಿರಂತರ ಗ್ರಾಮದ ಅಭಿವೃದ್ಧಿ ಮತ್ತು ಜನಪರ ಕೆಲಸಗಳಿಗೆ ತಾನು ಬದ್ಧ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಪಡುಪೆರಾರ ಗ್ರಾಮ ಪಂಚಾಯತ್‌ನಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಸಭಾಭವನದ ನೂತನ ವ್ಯವಸ್ಥೆ ಉದ್ಘಾಟಿಸಿದ ಬಳಿಕ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನುದ್ದೇಶಿಸಿ ಶಾಸಕರು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನದಿಗಳಿಂದ ನೀರೆತ್ತಿ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ವ್ಯಾಪ್ತಿ ಪ್ರದೇಶದ ಎಲ್ಲ ಗ್ರಾಮಗಳಿಗೆ ಸರಬರಾಜು ಮಾಡುವ ‘ಜಲ ಜೀವನ್’ ಯೋಜನೆಗಾಗಿ ೨೦೦ ಕೋಟಿ ರೂ ಡಿಪಿಆರ್(ಸಮಗ್ರ ಯೋಜನಾ ವರದಿ) ಸಿದ್ಧಪಡಿಸಲಾಗಿದ್ದು, ಯೋಜನೆಯಡಿ ಪಡುಪೆರಾರಕ್ಕೂ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ ಮಾತನಾಡಿ, ಜಿಲ್ಲೆಯಲ್ಲಿ ಪಡುಪೆರಾರವನ್ನು ಮಾದರಿ ಪಂಚಾಯತ್ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಸರ್ಕಾರಿ ಅನುದಾನಗಳ ಸಮರ್ಪಕ ಬಳಕೆಯೊಂದಿಗೆ ಗ್ರಾಮಸ್ಥರಿಗಾಗಿ ಪ್ರಾಮಾಣಿಕ ಕೆಲಸ ಮಾಡಬೇಕೆಂದುಕೊಂಡಿದ್ದೇನೆ. ಇದಕ್ಕೆ ಗ್ರಾಮಸ್ಥರು, ಜನಪ್ರತಿನಿಧಿಗಳ ಸಹಕಾರ ಅತ್ಯವಶ್ಯ ಎಂದರು.
ಈ ಸಂದರ್ಭದಲ್ಲಿ ಶಾಸಕರು ಪಂಚಾಯತ್ ವ್ಯಾಪ್ತಿಯ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರನ್ನು ಗೌರವಿಸಿದರು. ಜೊತೆಗೆ ಸಂತ್ರಸ್ತರಿಗೆ ಸರ್ಕಾರದ ಪರಿಹಾರ ಚೆಕ್ ಹಾಗೂ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ಸ್ಟವ್ ವಿತರಿಸಿದದರು.
ಕಾರ್ಯಕ್ರಮದಲ್ಲಿ ಪಡುಪೆರಾರ ಪಂಚಾಯತ್ ಅಧ್ಯಕ್ಷೆ ಅಮಿತಾ ಎಂ ಶೆಟ್ಟಿ, ಉಪಾಧ್ಯಕ್ಷೆ ಸೇಸಮ್ಮ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿಹಿಂಪ ಮುಖಂಡ ಸುನಿಲ್ ಪೆರಾರ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಇದೇ ವೇಳೆ ಪುಸ್ತಕ ಗೂಡು ಉದ್ಘಾಟಿಸಿದ ಶಾಸಕರು, ಪಡುಪೆರಾರ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರದಲ್ಲಿ ೨೦ ಲಕ್ಷ ರೂ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.