ರಾಣಿಪೇಟ್(ತಮಿಳುನಾಡು): ಯೂಟ್ಯೂಬ್ ನೋಡಿಕೊಂಡು ಜನ ಅಡುಗೆ, ಕಸೂತಿ, ಕೋಡಿಂಗ್ ಕೂಡಾ ಕಲಿಯುತ್ತಾರೆ. ಈಗಿನ ಕಾಲದಲ್ಲಿ ಯೂಟ್ಯೂಬ್ ಒಂದು ರೀತಿ ಎಲ್ಲರ ಫೋನ್ನಲ್ಲಿರೋ ಸ್ಕೂಲ್ ರೀತಿ ಆಗಿಬಿಟ್ಟಿದೆ. ಆದ್ರೆ ಅದು ಅತಿರೇಕಕ್ಕೆ ಹೋಗಿ ಅವಾಂತರಕ್ಕೆ ಕಾರಣವಾಗಬಾರದು ಅಷ್ಟೇ. ದುರದೃಷ್ಟವಶಾತ್ ಯೂಟ್ಯೂಬ್ ವಿಡಿಯೋ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ಅದೆಷ್ಟು ನಂಬಿಕೆ ಇತ್ತೆಂದರೆ ಆತ ತನ್ನ ಗರ್ಭಿಣಿ ಹೆಂಡತಿಗೆ ಮನೆಯಲ್ಲೇ ಡೆಲಿವರಿ ಮಾಡಿಸಲು ಹೊರಟುಬಿಟ್ಟ. ಇದರಿಂದಾಗಿ ಮುದ್ದಾದ ಗಂಡುಮಗು ಹುಟ್ಟುವಾಗಲೇ ಅಸುನೀಗಿದ್ದು ಆತನ ಪತ್ನಿ ವಿಪರೀತ ರಕ್ತಸ್ರಾವವಾಗಿ ಆಸ್ಪತ್ರೆ ಸೇರಿದ್ದಾಳೆ. ಸದ್ಯ ಈ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.
ಡಿ.20 ರಂದು ಸೋಮವಾರ ತಮಿಳುನಾಡಿನ ಲೋಕನಾಥನ್ ರನ್ನು ರಾಣಿಪೇಟೆಯ ಪೊಲೀಸರು ಬಂಧಿಸಿದರು. 2020ನೇ ಇಸವಿಯಲ್ಲಿ ಲೋಕನಾಥನ್ ಮತ್ತು ಗೋಮತಿ ಮದುವೆಯಾಗಿದ್ದರು. ಡಿಸೆಂಬರ್ 13ರಂದು ಗೋಮತಿಗೆ ಪ್ರಸವ ಆಗಬೇಕಿತ್ತು. ಆದರೆ ಡಿಸೆಂಬರ್ 18ರಂದು ಆಕೆಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಆಗ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಚ್ಛಿಸದ ಲೋಕನಾಥನ್ ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಅಲ್ಲಿ ತಿಳಿಸಿದಂತೆ ತಾನೇ ಮನೆಯಲ್ಲಿ ಹೆರಿಗೆ ಮಾಡಿಸಲು ನಿರ್ಧರಿಸಿದ್ದರು. ಲೋಕನಾಥನ್ ಸಹೋದರಿ ಗೀತಾ ಕೂಡಾ ಇವರಿಗೆ ಸಹಾಯ ಮಾಡಲು ಜೊತೆಗಿದ್ದರು.
