ಮುಂಬಯಿ : ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕುತ್ಪಾಡಿ ಉದ್ಯಾವರ ಇಲ್ಲಿನ ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿಯ ವಾರ್ಷಿಕ ಕೊಡಿತಿಂಗಳ ನೇಮೋತ್ಸವವು ಕಳೆದ ಗುರುವಾರ (ನ.೨೫)ಮೊದಲ್ಗೊಂಡು ಭಾನುವಾರ ಸಮಾಪನಗೊಂಡಿತು.
ಆ ಪ್ರಯುಕ್ತ ಕಳೆದ ಗುರುವಾರ ಅನ್ನನೈವೇದ್ಯದ ಹಸಿರುವಾಣಿ ಗರಡಿ ಪ್ರವೇಶ, ಅನ್ನನೈವೇದ್ಯ (ಅಗಲು ಸೇವೆ), ವ್ಯಾಘ್ರ ಚಾಮುಂಡಿ ದರ್ಶನ ಸೇವೆ, ಪ್ರಸಾದ ವಿತರಣೆ, ಶುಕ್ರವಾರ ಶ್ರೀ ಬ್ರಹ್ಮ ಬೈದರ್ಕಳರ ನೇಮೋತ್ಸವ, ಬೈದರ್ಕಳರ ಮತ್ತು ವ್ಯಾಘ್ರ ಚಾಮುಂಡಿ ದರ್ಶನ ಸೇವೆ, ಶನಿವಾರ ಮಾಯಾಂದಾಲ್ ಬಾಲೆ ಕೋಲ, ವ್ಯಾಘ್ರ ಚಾಮುಂಡಿ ಧೂಮಾವತಿ ಪರಿವಾರ ದೈವಗಳ ಭಂಡಾರ ಇಳಿಸಲ್ಪಟ್ಟಿತು. ರಾತ್ರಿ ನೇಮೋತ್ಸವ ಆರಂಭಗೊಂಡು ಭಾನುವಾರ ಮುಂಜಾನೆ ಕೊನೆಗೊಂಡಿತು.
ಗರೋಡಿಯ ಆಡಳಿತ ಮೊಕ್ತೇಸರ ಕುತ್ಪಾಡಿ ಪಟೇಲರಮನೆ ದೊಡ್ಡಮನೆ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ), ಮಲ್ಲಿಕಾ ಸಿ.ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕುತ್ಪಾಡಿ ಶೇಖರ್ ಶೆಟ್ಟಿ, ಪ್ರದೀಪ್‌ಚಂದ್ರ ಕುತ್ಪಾಡಿ, ನವೀನ್ ಶೆಟ್ಟಿ ತೊಂಬತು, ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ, ರಘುನಾಥ ಕೋಟ್ಯಾನ್ ಕಡೆಕಾರ್, ಮಟ್ಟಾರು ರತ್ನಾಕರ್ ಹೆಗ್ಡೆ, ನ್ಯಾಯವಾದಿ ಕುತ್ಪಾಡಿ ಜಯಶಂಕರ್, ಮನೋಹರ ಬಂಗೇರ, ವಾಮನ ಬಂಗೇರ ಕುತ್ಪಾಡಿ, ಹರೀಶ್ ಸುವರ್ಣ, ಗಣೇಶ್ ಕುಮಾರ್ (ಸಂಗಮ), ಸಂತೋಷ್ ಕುಮಾರ್ ಉದ್ಯಾವರ, ಉದಯಕುಮಾರ್ ಶೆಟ್ಟಿ ಕಿದಿಯೂರು, ಮೂಡುಬೆಟ್ಟು ಶೇಖರ್ ಶೆಟ್ಟಿ, ಅರ್ಚಕ ದಯಾನಂದ ಅಂಚನ್, ಕುತ್ಪಾಡಿ ಹಾಗೂ ಉದ್ಯಾವರ ಗ್ರಾಮದ ಗುರಿಕಾರರು, ಉದ್ಯಾವರ ಕುತ್ಪಾಡಿ ಮನೆತನದ ಕುಟುಂಬಸ್ಥರು, ಬಂಧುಮಿತ್ರರು, ಅರ್ಚಕರು, ಗ್ರಾಮಸ್ಥರು, ಸೇವಾ ಸಮಿತಿಗಳ ಕಾರ್ಯಕರ್ತರು, ಭಕ್ತಾದಿಗಳು ಪಾಲ್ಗೊಂಡು ಸಿರಿ-ಮುಡಿ, ಗಂಧ ಪ್ರಸಾದ ಸ್ವೀಕರಿಸಿ ಶ್ರೀ ಬ್ರಹ್ಮ ಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಪರಿವಾರ ದೈವಗಳ ಕೃಪೆಗೆ ಪಾತ್ರರಾದರು.
ದೇವಸ್ಥಾನದ ಪ್ರಧಾನ ಅರ್ಚಕ ಕುತ್ಪಾಡಿ ಬಾಲಕೃಷ್ಣ ಭಟ್ ಮತ್ತು ಶಿಷ್ಯವೃಂದವು ಶಾಸ್ತ್ರೋಕ್ತವಾಗಿ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ದೇವಸ್ಥ್ಥಾನದ ರಾಧಕೃಷ್ಣ ಭಟ್, ಗರೋಡಿಯ ದಯಾನಂದ ಅಂಚನ್ ಮತ್ತಿತರ ಗಣ್ಯರ ದಿವ್ಯೋಪಸ್ಥಿತಿಯೊಂದಿಗೆ ದೇವಸ್ಥಾನದಿಂದ ಕುತ್ಪಾಡಿ ಗರೋಡಿಗೆ ಮೆರವಣಿಗೆ, ಬೈದರ್ಕಳ ದರ್ಶನ ಹಾಗೂ ಪಟ್ಟಾಭಿಷೇಕದ ವಿಧಿವಿಧಾನಗಳು ನಡೆಸಲ್ಪಟ್ಟವು. ಸೂಡಾ ಕೋಟಿ ಪೂಜಾರಿ ಮತ್ತು ಸತೀಶ್ ಪೂಜಾರಿ ಬೈದರ್ಕಳ ಪಾತ್ರಿಗಳಾಗಿದ್ದು ಅಭಯವನ್ನಿತ್ತರು.
