ಮೂಡುಬಿದಿರೆ: ಹೊಸ ಪ್ರಯೋಗ, ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿರುವ ಮೂಡುಬಿದಿರೆ ಕಂಬಳವು ಮತ್ತೊಂದು ವಿಶೇಷತೆಯನ್ನು ಇದಿರು ನೋಡುತ್ತಿದೆ. ಮೂಡುಬಿದಿರೆ ಕಂಬಳದ ಕರೆಯ ಬಳಿ ತುಳುನಾಡಿನ ಪರಂಪರೆಯ ಗುತ್ತಿನ ಮನೆಯ ಶೈಲಿಯಲ್ಲಿ ವೇದಿಕೆ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅದು ಲೋಕಾರ್ಪಣೆಗೊಳ್ಳಲಿದೆ.
ಕಳೆದ 17 ವರ್ಷಗಳಿಂದ ಮೂಡುಬಿದಿರೆ ಕಡಲಕೆರೆಯಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಯುತ್ತಿದ್ದು, ಇಲ್ಲಿನ ಅಚ್ಚುಕಟ್ಟಿನ ವ್ಯವಸ್ಥೆಯಿಂದಾಗಿ ಮಾದರಿ ಕಂಬಳವೆಂದು ಜನಪ್ರಿಯವಾಗಿದೆ. ಇದೀಗ ಗುತ್ತಿನ ಮನೆ ವೇದಿಕೆ ನಿರ್ಮಾಣವಾಗುತ್ತಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗುತ್ತಿನ ಮನೆ ಮಾದರಿ ವೇದಿಕೆಯು 100 ಫೀಟ್ ಉದ್ದ, 70 ಫೀಟ್ ಅಗಲವಿದೆ. ಏಕಕಾಲಕ್ಕೆ ಗಣ್ಯರು ಸಹಿತ 500 ಮಂದಿ ಕುಳಿತು ಕಂಬಳ ವೀಕ್ಷಣೆ ಮಾಡುವ ಅವಕಾಶವಿದೆ. ಗುತ್ತಿನ ಮನೆಗಳಲ್ಲಿರುವಂತೆ ಬೃಹತ್ ಕಂಬಗಳು, ಮೂರು ಹಂತದಲ್ಲಿ ಮೇಲ್ಛಾವಣಿಯ ವಿನ್ಯಾಸವಿರುವಂತೆ ಯೋಜನೆ ರೂಪಿಸಲಾಗಿದೆ. ಶಾಸಕ, ಮೂಡುಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅವರ ಮುತುವರ್ಜಿಯಲ್ಲಿ, ಎಂಆರ್‍ಪಿಎಲ್ ಸಂಸ್ಥೆ ಯೋಜನೆಗೆ ಪ್ರಾಯೋಜಕತ್ವವನ್ನು ಒದಗಿಸಿದೆ. ಮಂಗಳೂರಿನ ಆನಂದ ಭಟ್ ಗುತ್ತಿನ ಮನೆಯ ವೇದಿಕೆಯ ವಿನ್ಯಾಸ ಮಾಡಿದ್ದು, ಮೂಡುಬಿದಿರೆ ಬೆನ್ನಿ ಮಾಥ್ಯೂ ಯೋಜನೆಯನ್ನು ರೂಪಿಸಿದ್ದಾರೆ. ಗುತ್ತಿಗೆದಾರ ರಾಜೇಶ್ ಬಂಗೇರ ಅವರ ನೇತೃತ್ವದಲ್ಲಿ ವಿಶಾಲವಾದ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.
ಯುವ ಕಂಬಳ ಓಟಗಾರರಿಗೆ ಉಚಿತ ತರಬೇತಿ ಸಹಿತ ಹಲವು ಕಂಬಳ ಕ್ಷೇತ್ರದ ಬೆಳವಾಣಿಗೆಗೆ ಪೂರಕವಾದ ಕೆಲಸ ಮಾಡುತ್ತಿರುವ ಗುಣಪಾಲ ಕಡಂಬ ಸಂಚಾಲಕತ್ವದ ಕಂಬಳ ಅಕಾಡೆಮಿಯು, ಮೂಡುಬಿದಿರೆ ಕಂಬಳ ಸಮಿತಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮೂಡುಬಿದಿರೆಯಲ್ಲಿ ಕಂಬಳ ಮ್ಯೂಸಿಯಂ ಮಾಡುವ ಚಿಂತನೆ ನಡೆಸುತ್ತಿದ್ದೆ. ಇದಕ್ಕೆ ಪೂರಕವಾಗಿ ಮೂಡುಬಿದಿರೆ ಕಂಬಳ ಕರೆಯ ಪ್ರದೇಶದಲ್ಲಿ ಜಾಗವನ್ನು ಗುರುತಿಸಿದ್ದು, ಯೋಜನೆ ವಿನ್ಯಾಸ ಕೂಡ ರಚನೆಯಾಗುತ್ತಿದೆ. ಸುಮಾರು 1.5 ಕೋಟಿ ರೂ.ವೆಚ್ಚದ ಈ ಯೋಜನೆಗೆ ಅದಾನಿ ಗ್ರೂಫ್ಸ್ 50 ಲಕ್ಷ ರೂ.ಅನುದಾನವನ್ನು ಘೋಷಿಸಿದೆ. ಸುಸಜ್ಜಿತ ಕಟ್ಟಡ, ಅದರೊಳಗಡೆ ಸಭಾಂಗಣ, 6 ಕೋಣೆಗಳು, ಗ್ರಂಥಾಲಯ, ಕಂಬಳ ಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸಲು ವಸ್ತುಸಂಗ್ರಹಾಲಯಕ್ಕೆ ವಿಶಾಲವಾದ ಹಾಲ್ ಯೋಜನೆಯಲ್ಲಿದೆ
