ಮೂಡುಬಿದಿರೆ: ನವೆಂಬರ್ 27ರಂದು ಮೂಡುಬಿದಿರೆಯಲ್ಲಿ ನಡೆಯಲಿರುವ 19ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆಯು ಕಂಬಳ ಕ್ರೀಡಾಂಗಣದ ಬಳಿಯ ಸೃಷ್ಟಿ ಗಾರ್ಡನ್ ಹಾಲ್ನಲ್ಲಿ ನ.02 ರಂದು ಮಂಗಳವಾರ ನಡೆಯಿತು.
ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಸ್ತು, ಸಮಯ ಪಾಲನೆಯೊಂದಿಗೆ ಈ ಬಾರಿಯ ಕಂಬಳವನ್ನು ಉತ್ತಮವಾಗಿ ಆಯೋಜಿಸಲಾಗುವುದು. ವಿಧಾನ ಪರಿಷತ್ ಚುನಾವಣೆಯ ದಿನಾಂಕ ಪ್ರಕಟವಾದರೆ ಕಂಬಳದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಲು ಕಷ್ಟ ಸಾಧ್ಯವಾಗಿರುವುದರಿಂದ ಮೂಡುಬಿದಿರೆಯ ಕಂಬಳವನ್ನು ಈ ಬಾರಿ ಮೊದಲಿಗೆ ಮಾಡಲಾಗುವುದು. ಈಗಾಗಲೇ ವೇದಿಕೆಯ ನಿರ್ಮಾಣ ಹಂತದಲ್ಲಿದ್ದು ಈ ಬಾರಿ ಪೂರ್ಣಗೊಳ್ಳದಿದ್ದರೂ ಬೇರೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ ಅದರಲ್ಲಿ ಸಭಾ ಕಾರ್ಯಕ್ರಮಗಳನ್ನು ಮಾಡಲಾಗುವುದು. ಅವಸರ ಮಾಡಿ ವೇದಿಕೆಯನ್ನು ಹಾಳು ಮಾಡುವುದು ಸರಿಯಲ್ಲ. ಮೂಡುಬಿದಿರೆಯ ಕಂಬಳವು ಅಚ್ಚುಕಟ್ಟಾಗಿ ನಡೆಯುವಲ್ಲಿ ಸ್ವಯಂ ಸೇವಕರ ಪಾತ್ರ ಪ್ರಮುಖವಾದುದು ಎಂದರು.
ಕಂಬಳ ಸಮಿತಿಯ ಕೋಶಾಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್, ತೀರ್ಪುಗಾರರ ಸಂಚಾಲಕ ರೆಂಜಾಳ ಕಾರ್ಯ ಸುರೇಶ್ ಕೆ.ಪೂಜಾರಿ, ಹೊಕ್ಕಾಡಿಗೋಳಿ ಕಂಬಳದ ಸಂಘಟಕ ರಶ್ಮಿತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಪ್ರಮುಖರಾದ ಕೆ.ಆರ್.ಪಂಡಿತ್, ಈಶ್ವರ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.
