ಕೈಕಂಬ : ಕಂದಾವರ, ಆದ್ಯಪಾಡಿ ಮತ್ತು ಕೊಳಂಬೆ ಗ್ರಾಮಗಳನ್ನೊಳಗೊಂಡ ಕಂದಾವರ ಪಂಚಾಯತ್‌ನಲ್ಲಿ ಶನಿವಾರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆಯಲ್ಲಿ ಕಂದಾವರ ವಾರ್ಡ್ ಸಭೆ ನಡೆಯಿತು. ಸಭೆಯಲ್ಲಿ ವಿದ್ಯುತ್ ಸಂಪರ್ಕರಹಿತರ ಮನೆಗಳ ಮಾಹಿತಿ, ಬೈಲು ಮಾಗಣೆ ಮೂಡುಕರೆಯ ತುರ್ಲುಗುಡ್ಡೆಯಲ್ಲಿರುವ ದೇವಸ್ಥಾನದ ಜಾಗ ಹಾಗೂ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಗಮನಸೆಳೆಯುವ ಚರ್ಚೆ ನಡೆಯಿತು.gur-sep-18-kandavara-2ನಾಗಬ್ರಹ್ಮ ಸನ್ನಿಧಿ : ತುರ್ಲುಗುಡ್ಡೆಯಲ್ಲಿ ಗುಡ್ಡೆ, ಕೃಷಿಭೂಮಿ ಸಹಿತ ನಾಗಬ್ರಹ್ಮ ರಕ್ತೇಶ್ವರಿ ಪರಿವಾರ ಶಕ್ತಿಗಳ ಸಾನಿಧ್ಯಕ್ಕೆ(ದೇವಸ್ಥಾನ) ಒಟ್ಟು ೧೭ ಎಕ್ರೆ ಜಾಗವಿದೆ. ಇದು ಕುಮ್ಕಿ ಜಾಗವಾಗಿದ್ದರೂ ಇಲ್ಲಿ ನೂರೂರು ವರ್ಷಗಳಿಂದ ಗ್ರಾಮಸ್ಥರು ಆರಾಧಿಸಿಕೊಂಡು ಬರುತ್ತಿರುವ ನಾಗನ ದೇವಸ್ಥಾನವಿದೆ. ಕೆಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಜಿಲ್ಲಾಡಳಿತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದರೂ, ಮರಗಳನ್ನು ಕಡಿದು ಅರಣ್ಯ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಸಾಧ್ಯವಾಗದೆ ಪ್ರಸ್ತಾವ ರದ್ದಾಗಿತ್ತು.

ಇದೀಗ ಇಲ್ಲಿನ ೫ ಎಕ್ರೆ ಜಾಗದಲ್ಲಿ ನೆಡುತೋಪು(ಅರಣ್ಯೀಕರಣ), ೫೦ ಸೆಂಟ್ಸ್ ಜಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ೫ ಎಕ್ರೆ ಜಾಗದಲ್ಲಿ ನಿವೇಶನರಹಿತರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಪ್ರಸ್ತಾವಿಸಿದೆ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಪಂಚಾಯತ್ ಮೂಲಕ ಪ್ರಸ್ತಾವಕ್ಕೆ ವಿರೋಧ ನಿರ್ಣಯ ಪಡೆಯಲು ಪ್ರಯತ್ನಿಸಿದರು.

ಕಂದಾಯ ಇಲಾಖೆಯ ದಾಖಲೆಯ ೧೧ನೇ ಕಾಲಂನಲ್ಲಿ ಮೊತ್ತಮೊದಲಾಗಿ ಇಂತಹ ಜಾಗಗಳು ಕೃಷಿಭೂಮಿ, ದೇವಸ್ಥಾನ ಅಥವಾ ಮನೆಗಳಿರುವ ಜಾಗವೆಂದು ನಮೂದಿಸಲ್ಪಡಬೇಕು. ಪಂಚಾಯತ್‌ನಲ್ಲಿ ನಿರ್ಣಯ ಕೈಗೊಂಡರೂ ಗ್ರಾಮಸ್ಥರು ಈ ವಿಷಯದಲ್ಲಿ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತದಲ್ಲಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಯಶವಂತ ಬೆಳ್ಚಡರು ಕಾನೂನಾತ್ಮಕ ಸಲಹೆ ನೀಡಿದರು.

ಪಂಚಾಯತ್ ವತಿಯಿಂದ ತ್ಯಾಜ್ಯ ವಿಲೇವಾರಿ ಅತಿ ಮಹತ್ವದ ಕೆಲಸವಾಗಿದೆ. ಮನೆಯ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸುವತ್ತ ಗ್ರಾಮಸ್ಥರು ಹೆಚ್ಚೆಚ್ಚು ಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ತ್ಯಾಜ್ಯ ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಗ್ರಾಮಸ್ಥರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪಿಡಿಒ ಹೇಳಿದರು. ಉಪಾಧ್ಯಕ್ಷೆ ಚಂದ್ರಿಕಾ, ಕಾರ್ಯದರ್ಶಿ ಜಲಜಾಕ್ಷಿ ಹಾಗೂ ಕಂದಾವರ ವಾರ್ಡ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *