ಮೂಡುಬಿದಿರೆ: ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಕರಿಯನಂಗಡಿ ಸಮೀಪದ ಕಾಂತಾವರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಸೋಮವಾರ ನೂರಾರು ಜನ ಸೇರಿಕೊಂಡು ಕೋಳಿ ಅಂಕದಲ್ಲಿ ನಿರತರಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಬೆಳುವಾಯಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಕೂಡ ಕೋವಿಡ್ ಮಾರ್ಗಸೂಚಿಯಂತೆ ಸರಳ ಹಾಗೂ ಶಿಸ್ತುಬದ್ಧವಾಗಿ ನಡೆದಿದ್ದರೆ ಇತ್ತ ಕಾಂತಾವರ ರಸ್ತೆ ಬದಿಯಲ್ಲಿ ಮಾತ್ರ ನೂರಾರು ಜನ ಸೇರಿಕೊಂಡು ಕೋಳಿ ಅಂಕದಲ್ಲಿ ನಿರತರಾಗಿದ್ದು ಕೊರೊನಾ ಹೆಚ್ಚಳಕ್ಕೆ ಕಾರಣರಾಗಿದ್ದಾರೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳುವಾಯಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಕರಿಯನಂಗಡಿ ಸಮೀಪದ ಕಾಂತಾವರ ಕ್ರಾಸ್ ಬಳಿ ನಡೆಯುತ್ತಿರುವ ಕೋಳಿ ಅಂಕದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ನಿಲ್ಲಿಸುವಂತೆ ಪಂಚಾಯಿತಿ ಸದಸ್ಯರೊಬ್ಬರು ಪಿಡಿಒ ಅವರನ್ನು ಕೇಳಿಕೊಂಡಾಗ ಪೊಲೀಸರಿಗೆ ದೂರು ನೀಡುವುದು ನನ್ನ ಕೆಲಸವಲ್ಲ ಎಂದು ಅಧಿಕಾರಿ ಉತ್ತರಿಸಿ ಜವಬ್ದಾರಿಯಿಂದ ನುಣುಚಿಕೊಂಡರೆನ್ನಲಾಗಿದೆ. ಕೊನೆಗೆ ಸ್ಥಳೀಯರು ಡಿಹೆಚ್‌ಒಗೆ ದೂರು ನೀಡಿದ್ದು ವಾಹನದಲ್ಲಿ ಸಿಬಂದಿಗಳು ಸ್ಥಳಕ್ಕಾಗಮಿಸುತ್ತಿರುವ ಮಾಹಿತಿ ಬರುತ್ತಿದ್ದಂತೆ ಕೋಳಿ ಅಂಕದಲ್ಲಿದ್ದ ಜನ ಜಾಗಖಾಲಿ ಮಾಡಿದರೆನ್ನಲಾಗಿದೆ.
