ಮೂಡುಬಿದರೆ: ಆಳ್ವಾಸ್ ನುಡಿಸಿರಿ 2014 ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ವರ್ಷವೂ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. `ಕರ್ನಾಟಕ: ವರ್ತಮಾನದ ತಲ್ಲಣಗಳು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಾಲ್ಕು ವಿಚಾರ ಗೋಷ್ಠಿಗಳು ನಡೆಯಲಿದೆ.
ಕೃಷಿ, ಪರಿಸರ: ವರ್ತಮಾನದ ತಲ್ಲಣಗಳು, ಭಾಷೆ-ಶಿಕ್ಷಣ: ವರ್ತಮಾನದ ತಲ್ಲಣಗಳು. ಕಲೆ: ವರ್ತಮಾನದ ತಲ್ಲಣಗಳು ಮತ್ತು ಸಾಹಿತ್ಯ: ವರ್ತಮಾನದ ತಲ್ಲಣಗಳು ಎಂಬ ನಾಲ್ಕು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಕೃಷಿ- ಶಿವಾನಂದ ಕಳವೆ, ಪರಿಸರ- ನಾಗೇಶ ಹೆಗಡೆ, ಭಾಷೆ- ಡಾ.ಮೋಹನ ಚಂದ್ರಗುತ್ತಿ, ಶಿಕ್ಷಣ- ಡಾ.ಗುರುರಾಜ ಕರ್ಜಗಿ, ಶಿಷ್ಟ ಕಲೆಗಳು – ಎ.ಈಶ್ವರಯ್ಯ ಮಣಿಪಾಲ, ಜಾನಪದ ಕಲೆಗಳು- ಡಾ.ಕೆ.ಆರ್.ಸಂಧ್ಯಾರೆಡ್ಡಿ, ಸೃಜನ ಸಾಹಿತ್ಯ: ಪ್ರತಿಭಾ ನಂದಕುಮಾರ್ ಹಾಗೂ ಸೃಜನೇತರ ಸಾಹಿತ್ಯದ ಕುರಿತು ಡಾ.ಸಿ.ಎನ್. ರಾಮಚಂದ್ರನ್ರವರು ವಿಚಾರ ಮಂಡಿಸಲಿದ್ದಾರೆ.
ಶತಮಾನದ ನಮನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿದ್ದು, ಪ್ರವಾಸಿ ಕಂಡ ಇಂಡಿಯಾ ಪುಸ್ತಕ ಸಂಪಾದಿಸಿ, ಕರಾವಳಿ ಕುರಿತು ಅಪಾರ ಅಭಿಮಾನವನ್ನು ಹೊಂದಿದ್ದ ನಾಡೋಜ ಡಾ.ಎಚ್.ಎಲ್.ನಾಗೇಗೌಡರಿಗೆ ಡಾ.ಚೆಕ್ಕೆರೆ ಶಿವಶಂಕರ್ ಹಾಗೂ ಕಾಸರಗೋಡಿನ ಹೋರಾಟಗಾರ ಶತಾಯುಷಿ ನಾಡೋಜ ಕೈಯ್ಯಾರ ಕಿಂಞಣ್ಣರೈಯವರ ಸಾಧನೆಗಳಿಗೆ ಸದಾನಂದ ಪೆರ್ಲ ನುಡಿನಮನ ಸಲ್ಲಿಸಲಿದ್ದಾರೆ.
ನಮ್ಮನ್ನು ಅಗಲಿರುವ ಸಾಹಿತಿಗಳನ್ನು ಸಂಸ್ಮರಣೆ ಕಾರ್ಯಕ್ರಮದ ಮೂಲಕ ನೆನಪಿಸುವ ಕಾರ್ಯ ನುಡಿಸಿರಿಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ವರ್ಷ ರಾಷ್ಟ್ರಕವಿ ನಾಡೋಜ ಡಾ.ಜಿ.ಎಸ್. ಶಿವರುದ್ರಪ್ಪರನ್ನು ಡಾ.ಟಿ.ಪಿ.ಅಶೋಕ್ ಹಾಗೂ ಡಾ.ಯು.ಆರ್. ಅನಂತಮೂರ್ತಿಯವರನ್ನು ಎನ್. ಮನುಚಕ್ರವರ್ತಿಯವರು ನೆನಪುಮಾಡಿಕೊಡಲಿದ್ದಾರೆ.
