ಸುದ್ದಿ9ಮಂಗಳೂರು: ಎರಡೂವರೆ ವರ್ಷಗಳ ಹಿಂದೆ ನಡೆದಿದ್ದ ನಗರದ ಲೇಡಿಗೋಷನ್ ಆಸ್ಪತ್ರೆಯ ಮುಂಭಾಗದಲ್ಲಿರುವ `ಕಾಂಚನ್ ಟೆಕ್ಸ್ಟೈಲ್’ ಸಂಸ್ಥೆಯ ಮೆನೇಜರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 12ನೇ ಆರೋಪಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಉಳ್ಳಾಲ ಸಮೀಪದ ಉಚ್ಚಿಲ ನಿವಾಸಿ ಮುನೀರ್(28) ಶರಣಾದ ಆರೋಪಿ.
ಬಂದರು ಠಾಣಾ ಪೊಲೀಸರು ಮುನೀರ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಭವಂತಿ ಸ್ಟ್ರೀಟ್ನಲ್ಲಿ ವಾಸವಾಗಿದ್ದ ದಿನೇಶ್ ರಾಜ್(44) ಎಂಬವರನ್ನು ಕಳೆದ 2012ರ ಫೆ.14ರಂದು ರಾತ್ರಿ ಏಳು ಗಂಟೆಯ ಸುಮಾರಿಗೆ ಮಾರಕಾಯುಧಗಳಿಂದ ಕಡಿದು ಕೊಲೆಗೈಯಲಾಗಿತ್ತು.
ಕಾರಿನಲ್ಲಿ ಬಂದಿದ್ದ ಹಂತಕರು ಸಾರ್ವಜನಿಕರು ನೋಡುತ್ತಿದ್ದಂತೆಯೇ ಕಾಂಚನ್ ಟೆಕ್ಸ್ಟೈಲ್ ಮಳಿಗೆಯೊಳಗೆ ಪ್ರವೇಶಿಸಿ ತಲವಾರು ಹಾಗೂ ಮಚ್ಚಿನಿಂದ ಯದ್ವಾತದ್ವಾ ಕಡಿದು ಕೊಲೆಗೈದು ಪರಾರಿಯಾಗಿದ್ದರು. ಬಂದರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 11 ಮಂದಿಯನ್ನು ಬಂಧಿಸಲಾಗಿತ್ತು.
ಮುನೀರ್ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದಾನೆ. ಈತ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತನ ಬಂಧನದೊಂದಿಗೆ ಪ್ರಕರಣದ ಎಲ್ಲಾ 12 ಮಂದಿ ಸೆರೆಸಿಕ್ಕಂತಾಗಿದೆ.

