ಮುಂಬಯಿ : ಜಗತಿಕವಾಗಿ ಜನಮಾನಸಕ್ಕೆ ಪರಿಣಮಿಸಿರುವ ಕೊರೋನಾ ಮಾರಕ ಸಾಂಕ್ರಮಿಕ ರೋಗದಿಂದ ಲಾಕ್‌ಡೌನ್ ಅವಧಿಯಲ್ಲಿ ಕಲಾವಿದರ ಕಷ್ಟವನ್ನು ಅರಿತು ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಕಲಾ ಸೌರಭವು ಕಲಾಸೇವೆ ಎಂದೇ ಸ್ಪಂದಿಸಲು ಪ್ರಯತ್ನಿಸುತ್ತಿದೆ ಎಂದು ಕಲಾ ಸೌರಭ ಸಂಸ್ಥೆ ಮುಂಬಯಿಯ ಇದರ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅಭಿಪ್ರಾಯಪಟ್ಟರು.
ಹರಿಕಥಾ ಪರಿಷತ್ ಮಂಗಳೂರು ಹಾಗೂ ಕಲಾ ಸೌರಭ ಮುಂಬಯಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕದ್ರಿ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಅಗಲಿದ ಕಲಾವಿದರ ಶ್ರದ್ಧಾಂಜಲಿ ಹಾಗೂ ಆರ್ಥಿಕ ಅಶಕ್ತ ಕಲಾವಿದರಿಗೆ ದಿನಸಿ ಕಿಟ್ ವಿತರಣಾ ಪ್ರಥಮ ಭಾಗದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿ ಪದ್ಮನಾಭ ಸಸಿಹಿತ್ಲು ತಿಳಿಸಿದರು.
ಹರಿಕಥಾ ಪರಿಷತ್ ಗೌರವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದು, ಇತ್ತೀಚೆಗೆ ನಿಧನರಾದ ಸ್ಯಾಕ್ಸೋಫೋನ್ ಕಲಾವಿದ ಡಾ| ಮಚ್ಚೇಂದ್ರನಾಥ ಮಂಗಳಾದೇವಿ ಮತ್ತು ತಬಲಾ ವಾದಕ ಸುರೇಶ್ ಶೆಟ್ಟಿ ಅವರಿಗೆ ಕಾರ್ಯಕ್ರಮದಲ್ಲಿ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಮತ್ತು ಸಂಚಾಲಕ ಸುಧಾಕರ್ ರಾವ್ ಪೇಜಾವರ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಶ್ರೀಕೃಷ್ಣ ಯಕ್ಷ ಸಭಾದ ಪ್ರಭಾಕರ್ ರಾವ್, ಸಂಗೀತ ಕಲಾವಿದ ವೆಂಕಟೇಶ್ ಅವರು ಉಪಸ್ಥಿತರಿದ್ದರು. ಕಲಾ ಸೌರಭದ ಅಭಿಮಾನಿ ಪೋಷಕರು ದಾನಿಗಳಿಂದ ಒದಗಿದ ಸಹಕಾರದಿಂದ ಸಂತ್ರಸ್ತ ಗಾಯಕರು, ಹಾರ್ಮೋನಿಯಂ, ತಬಲಾ, ಕೊಳಲು, ಸ್ಯಾಕ್ಸ್ಸೊಫೋನ್, ಕೊಂಬಿನವರು, ಜಾನಪದ ಗಾಯನ ನೃತ್ಯ ಮುಂತಾದ ಕಲಾವಿದರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಲಾಯಿತು. ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಸಹಕಾರ್ಯವನ್ನಿತ್ತ ಸಂಪನ್ಮೂಲ ಪೋಷಕರಿಗೆ ಕೃತಜ್ಞತೆ ಸಲ್ಲಿಸಿ ಸಂಯೋಜಿಸಿದ ಪದ್ಮನಾಭ ಸಸಿಹಿತ್ಲು ಅವರನ್ನು ಹರಿಕಥಾ ಪರಿಷತ್ ವತಿಯಿಂದ ಅಭಿವಂದಿಸಿ ಗೌರವಿಸಲಾಯಿತು.
ಕಲಾಸೌರಭದ ತವರೂರು ಸದಸ್ಯ ಹಾಗೂ ಹರಿಕಥಾ ಪರಿಷತ್ ಗೌರವ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಡಾ| ಎಸ್. ಪಿ. ಗುರುದಾಸ್ ಪ್ರಾರ್ಥಿಸಿ ವಂದಿಸಿದರು.
