ಸುದ್ದಿ9ಬೆಳ್ತಂಗಡಿ: `ದೇಶದಲ್ಲಿ ಗೋವುಗಳ ಮಾರಣಹೋಮ ನಡೆಯುತ್ತಿದ್ದು ಗೋಸಂತತಿ ನಾಶವಾಗುತ್ತಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಗೋವನ್ನು ಸರಕಾರ ರಾಷ್ಟ್ರ ಪ್ರಾಣಿ ಎಂಬುದಾಗಿ ಘೋಷಿಸಬೇಕು’ ಎಂದು ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗದ ಉಪಾಧ್ಯಕ್ಷ ಜಿತೇಂದ್ರ ಕೊಟ್ಟಾರಿ ಒತ್ತಾಯ ಮಾಡಿದರು. ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಬೆಳ್ತಂಗಡಿ ಇದರ ವತಿಯಿಂದ ವಿಶ್ವ ಹಿಂದು ಪರಿಷತ್ ಸುವರ್ಣ ಮಹೋತ್ಸವದ ಪ್ರಯುಕ್ತ ಸಾಮೂಹಿಕ ಗೋ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ದೇಶದಿಂದ 18 ರಾಷ್ಟ್ರಗಳಿಗೆ ಗೋಮಾಂಸ ರಫ್ತು ಆಗುತ್ತಾ ಇದೆ. ಗೋಹತ್ಯೆ ನಿಷೇಧಕ್ಕೆ ಬುದ್ಧಿಜೀವಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ನಾವು ನಮ್ಮ ಭೂಮಿಯನ್ನು ಮಾತೃಭೂಮಿ ಎಂದು ಪೂಜೆ ಮಾಡುತ್ತೇವೆ. ಅದೇ ರೀತಿ ಗೋವನ್ನು ಮಾತೃಸ್ಥಾನದಲ್ಲಿಟ್ಟು ಗೌರವಿಸುವ ಸಂಸ್ಕೃತಿ ನಮ್ಮದು. ಗೋವುಗಳನ್ನು ರಕ್ಷಿಸುವ ಪಣ ತೊಡಬೇಕು. ಭಾರತ ದೇಶ ಸನಾತನ ಸಂಸ್ಕೃತಿಯನ್ನು ಹೊಂದಿರುವ ದೇಶ. ಪ್ರಕೃತಿಯನ್ನು ಆರಾಧಿಸುವ ಪೂಜ್ಯ ಭಾವನೆಯಿಂದ ಗೌರವಿಸುವ ನಮ್ಮ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮಾನವನಲ್ಲಿ ಅಜ್ಞಾನದ ಕತ್ತಲನ್ನು ತೆಗೆದು ಸುಜ್ಞಾನದ ಬೆಳಕನ್ನು ನೀಡುವ ದೀಪಾವಳಿಯಂತೆ ನಮ್ಮ ಸಂಸ್ಕೃತಿಯೂ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭ ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಮುಖಂಡರುಗಳಾದ ಹರಿದಾಸ ಗಾಂಭೀರ, ಜಯರಾಮ ಭಂಡಾರಿ, ಅಚ್ಚುತ ಪೂಜಾರಿ, ರತ್ನರಾಜ ಜೈನ್, ನಾಗೇಂದ್ರ, ರಮೇಶ್ ಪೂಜಾರಿ, ಸಂದೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಕ್ಷೇತ್ರದ ಅರ್ಚಕರು ಗೋಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಮಹಿಳೆಯರು ಗೋವುಗಳನ್ನು ಸಿಂಗರಿಸಿ ಪೂಜಿಸಿ ಆರತಿ ಬೆಳಗಿದರು. ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರಭಾಕರ ಗೌಡ ಪೊಸಂದೋಡಿ ಸ್ವಾಗತಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿ, ವಿಎಚ್ಪಿ ಧರ್ಮಸ್ಥಳ ಭಾಗದ ಕಾರ್ಯದಶರ್ಿ ಸಂದೇಶ್ ವಂದಿಸಿದರು.

