ಕೋಲಾರ: ಟೊಮೇಟೊ ಹಾಗೂ ಮಾವು ಬೆಳೆಗಳಿಗೆ ಪ್ರತಿ ಕೆಜಿಗೆ ೧೦ ರೂ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರೈತಸಂಘದಿಂದ ನಗರದ ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಟೊಮೇಟೊ, ಮಾವು ಸುರಿದು ಕೃಷಿ, ತೋಟಗಾರಿಕೆ ಸಚಿವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರತಿಭಟನೆ ಮಾಡಿ ಉಪತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯದಲ್ಲಿ ಕೃಷಿ ತೋಟಗಾರಿಕೆ ಮಂತ್ರಿಗಳು ನಾಪತ್ತೆಯಾಗಿದ್ದಾರೆ. ಇನ್ನು ಕೋಲಾರ ಜಿಲ್ಲೆಗೆ ಮೂರು ತಿಂಗಳಿಗೆ ಒಬ್ಬ ಉಸ್ತುವಾರಿಯಂತೆ ಬದಲಾವಣೆ ಮಾಡುವ ಮುಖಾಂತರ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ೨ನೇ ಅಲೆ ಸೃಷ್ಠಿಸಿರುವ ಅವಾಂತರಗಳಿಗೆ ಜಿಲ್ಲೆಯ ಟೊಮೇಟೊ ಹಾಗೂ ಮಾವು ಬೆಳೆಗಾರರ ಬದುಕು ಛಿದ್ರವಾಗಿದೆ. ಲಕ್ಷಾಂತರರೂಪಾಯಿ ಖಾಸಗಿ ಸಾಲ ಮಾಡಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ಸಮೃದ್ಧವಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿಲ್ಲದೆ ರಸ್ತೆಗಳಲ್ಲಿ ಟೊಮೇಟೊ ಹಾಗೂ ಮಾವನ್ನು ಸುರಿಯುತ್ತಿದ್ದರೂ ಇದರ ಬಗ್ಗೆ ಗಮನಹರಿಸದ ಜಿಲ್ಲಾಡಳಿತ ಕೃಷಿ-ತೋಟಗಾರಿಕೆ ಅಧಿಕಾರಿಗಳು ಸೌಜನ್ಯಕ್ಕಾದರೂ ರೈತರಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗಗಳಿಂದ ಒಂದಲ್ಲಾ ಒಂದು ಸಮಸ್ಯೆಗಳಿಗೆ ರೈತರು ಸಿಲುಕುತ್ತಿದ್ದರೂ ಈ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕೊಡುತ್ತಿಲ್ಲ. ನಾವು ರೈತಪರ ಸರ್ಕಾರಗಳೆಂದು ಹೇಳಿ ರೈತರನ್ನೇ ಮಾರಾಟಕ್ಕಿಟ್ಟು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಾಶ ಮಾಡುವ ಜೊತೆಗೆ ಜಿಲ್ಲಾದ್ಯಂತ ಟೊಮೇಟೊ, ಮಾವು ಮತ್ತಿತರ ಬೆಲೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಸರ್ಕಾರ ರೈತರ ಕಣ್ಣೊರೆಸಲು ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತೆ ಪ್ರತಿ ಹೆಕ್ಟೇರ್‌ಗೆ ೧೦ ಸಾವಿರ ಘೋಷಣೆ ಮಾಡಿ ಕೈತೊಳೆದುಕೊಂಡು ಈ ಪರಿಹಾರದಲ್ಲಿ ಮಾವು ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದಕ್ಕೆ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದ ಒಳಗೆ ಜಿಲ್ಲೆಯ ಟೊಮೇಟೊ, ಮಾವು ಬೆಳೆಗಳ ನಷ್ಟದ ಬಗ್ಗೆ ಸಮರ್ಪಕವಾದ ಮಾಹಿತಿ ಪಡೆಯಲು ಸರ್ಕಾರ ವಿಶೇಷ ತಂಡ ರಚನೆ ಮಾಡಿ ಸಂಕಷ್ಟಲದಲ್ಲಿರುವ ರೈತರ ಆತ್ಮ ಸ್ಥೈರ್ಯ ತುಂಬಲು ನಾಪತ್ತೆಯಾಗಿರುವ ಕೃಷಿ-ತೋಟಗಾರಿಕೆ ಮಂತ್ರಿಗಳನ್ನು ಹುಡುಕಿಕೊಟ್ಟು ಪ್ರತಿ ಕೆಜಿಗೆ ೧೦ ರೂಪಾಯಿ ಬೆಂಬಲ ಬೆಲೆ ನೀಡದೆ ಇದ್ದರೆ ಟ್ರಾಕ್ಟರ್‌ಗಳಲ್ಲಿ ಟೊಮೇಟೊ, ಮಾವು ಸಮೇತ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು. ಮನವಿ ಸ್ವೀಕರಿಸಿದ ಶಿರಸ್ತೇದಾರ್ ಹೇಮಲತಾ ಅವರು, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ಕಲೇರಿ ಹನುಮಯ್ಯ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತರ‍್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ತರ‍್ನಹಳ್ಳಿ ವೆಂಕಟೇಶಪ್ಪ, ಯಲ್ಲಪ್ಪ ಹರೀಶ್ ಮುಂತಾದವರಿದ್ದರು.
