ಕೈಕಂಬ: ದೇವರ ಕೆಲಸಕ್ಕೆ ಧರ್ಮ ಅಡ್ಡಿಯಾಗದು ! ಕೊರೊನಾ ಸಂಕಷ್ಟ ಕಾಲದಲ್ಲಿ ಈ ಮಾತು ಜನಜನಿತವಾಗಿದೆ. ವಾಮಂಜೂರು ಪ್ರದೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ. ಭರತ್ ಶೆಟ್ಟಿ ನೇತೃತ್ವದ ಕೋವಿಡ್ ವಾರ್ ರೂಂನಲ್ಲಿ ಶವ ಸಂಸ್ಕಾರ ಉಸ್ತುವಾರಿ ಮೂಲಕ ಬಡ ಅಶಕ್ತ ಕುಟುಂಬಗಳಿಗೆ ಆಶಾಕಿರಣವಾಗಿರುವ ಉದ್ಯಮಿ ರಘು ಸಾಲ್ಯಾನ್ ಹಾಗೂ ಜೈಶಂಕರ್ ಮಿತ್ರ ಮಂಡಳಿ ಗೆಳೆಯರು, ಇದುವರೆಗೆ ಹಲವರಿಗೆ ಉಚಿತ ವೈದ್ಯಕೀಯ ನೆರವು ನೀಡಿರುವುದಲ್ಲದೆ ಎಂಟು ಮಂದಿ ಸೋಂಕಿತರ ಅಂತ್ಯಕ್ರಿಯೆ ನಡೆಸಿ ಎಲ್ಲೆಡೆ ಪ್ರಸಂಶೆಗೊಳಗಾಗಿದ್ದಾರೆ.
ವಾಮAಜೂರಿನ ಮಂಗಳಜ್ಯೋತಿಯ ಮಂಗಳನಗರದಲ್ಲಿ ಕಡು ಬಡತನದಲ್ಲಿರುವ ಮೊನಿಕಾ ರೋಡ್ರಿಗಸ್(೬೬) ಐದು ದಿನಗಳ ಹಿಂದೆ ಕೋವಿಡ್ ಸೋಂಕಿತರಾದಾಗ ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ವಿಷಯ ತಿಳಿಯುತ್ತಲೇ ರಘು ಸಾಲ್ಯಾನ್ ಹಾಗೂ ಅವರ ತಂಡ ಕುಟುಂಬಕ್ಕೆ ನೆರವಾಯಿತು. ಚಿಕಿತ್ಸೆಗೆ ಸ್ಪಂದಿಸಿದ ಮೋನಿಕಾ ಶನಿವಾರ ಕೊನೆಯುಸಿರೆಳೆದರು.
ತಾಯಿಯ ಶವಸಂಸ್ಕಾರ ನಡೆಸಲು ಅಸಮರ್ಥರಾಗಿದ್ದ ಸಂದರ್ಭದಲ್ಲಿ ಮಕ್ಕಳಾದ ಬಬಿತಾ ರೋಡ್ರಿಗಸ್ ಮತ್ತು ಗೀತಾ ರೋಡ್ರಿಗಸ್ ಅವರಿಗೆ ವಾಮಂಜೂರು ಚರ್ಚ್ನ ಧರ್ಮಗುರು ಫಾ. ಜೇಮ್ಸ್ ಡಿ’ಸೋಜ ಚರ್ಚ್ ಆವರಣದಲ್ಲಿ ಧಪನ ಕಾರ್ಯಕ್ಕೆ ಸಕಲ ವ್ಯವಸ್ಥೆ ಮಾಡಿದರು. ಕುಟುಂಬಕ್ಕೆ ಬೆಂಗಾವಲಾಗಿದ್ದು ಪಿಪಿ ಕಿಟ್ ಧರಿಸಿದ್ದ ರಘು ಸಾಲ್ಯಾನ್, ಫ್ರಾನ್ಸಿಸ್ ಕುಟಿನ್ಹೋ, ಕಿಶೋರ್ ವಾಝ್, ಫ್ರಾನ್ಸಿಸ್ ಪಿಂಟೋ ಮತ್ತು ಅರ್ವಿನ್ ಕಾರ್ಡೋಝರು ಜೈಶಂಕರ್ ಮಿತ್ರ ಮಂಡಳಿಯ ಆ್ಯಂಬುಲೆನ್ಸ್ನಲ್ಲಿ ತರಲಾದ ಮೊನಿಕಾರ ಶವದ ಅಂತ್ಯಕ್ರಿಯೆ ನಡೆಸಿದರು. ಮಾಜಿ ಮೇಯರ್ ಭಾಸ್ಕರ್ ಉಪಸ್ಥಿತರಿದ್ದರು. ಸಾಲ್ಯಾನ್ ತಂಡ ಇದುವರೆಗೆ ವಾಮಂಜೂರು ಚರ್ಚ್ನಲ್ಲಿ ಮೂವರು ಬಡ ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆಸಿದೆ.
“ಕೊರೊನಾ ಸಂಕಷ್ಟ ಕಾಲದಲ್ಲಿ ನಾವು ಎಲ್ಲ ಜಾತಿ ಧರ್ಮದವರ ಕಷ್ಟಕ್ಕೆ ಸ್ಪಂದಿಸಿದ್ದೇವೆ. ಯಾರಿಂದಲೂ ಚಿಕ್ಕಾಸು ಪಡೆದಿಲ್ಲ. ಮಾನವೀಯ ನೆಲೆಯ ಈ ಸೇವೆ ದೇವರ ಕೆಲಸವಾಗಿದೆ. ಪ್ರಸಕ್ತ ಸಂದರ್ಭದಲ್ಲಿ ದಿನದ ೨೪ ತಾಸು ಸೋಂಕಿತರು ಮತ್ತು ಅವರ ಕುಟುಂಬಿಕರಲ್ಲಿ ನೆಮ್ಮದಿಯ ಉಸಿರಾಟಕ್ಕಾಗಿ ಹೆಣಗಾಡುತ್ತಿದ್ದೇವೆ” ಎಂದು ಚರ್ಚ್ ಆವರಣದಲ್ಲಿ ಮೋನಿಕಾರ ಶವ ಸಂಸ್ಕಾರ ನಡೆಸಿದ ಬಳಿಕ ಮಾಧ್ಯಮಕ್ಕೆ ರಘು ಸಾಲ್ಯಾನ್ ತಿಳಿಸಿದರು.
