ಕೈಕಂಬ : ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಥಮವಾಗಿ ಕರಿಯಂಗಳ ಮತ್ತು ಅಮ್ಮುಂಜೆ ಗ್ರಾಮದ ಕೃಷಿಕರ ಜೊತೆ ಇಲಾಖಾ ಅಧಿಕಾರಿಗಳು ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಶ್ರಯದಲ್ಲಿ `ಸರ್ವಮಂಗಳಾ’ ಸಭಾಗೃಹದಲ್ಲಿ ಶುಕ್ರವಾರ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಬಗ್ಗೆ ಬಂಟ್ವಾಳ ಕೃಷಿ ಇಲಾಖೆ ವತಿಯಿಂದ ಪ್ರಾತ್ಯಕ್ಷಿಕೆ ನಡೆಯಿತು.
ಬಂಟ್ವಾಳ ತಾಲೂಕಿನ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುವ ಹೊಸ ಯೋಜನೆಗೆ ಶಾಸಕರ ತಂಡ ,ಆಸಕ್ತ ಕೃಷಿಕರು, ಸ್ಥಳೀಯ ಸೊಸೈಟಿ ಹಾಗೂ ಕೃಷಿ ಇಲಾಖೆಯ ಸಹಕಾರದಿಂದ ತಯಾರಿ ಮಾಡಲಾಗಿದೆ.ಪ್ರಸ್ತುತ ಅಮ್ಮುಂಜೆ ಮತ್ತು ಕರಿಯಂಗಳ ಗ್ರಾಮದಲ್ಲಿರುವ ಹಡಿಲು ಬಿದ್ದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗೆ ಕ್ರಮಕೈಗೊಳ್ಳಲಾಗಿದ್ದು, ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘ ನೆರವು ನೀಡಲಿದೆ. ಹಾಗೂ ಯಾಂತ್ರಿಕ ಉಪಕರಣಗಳನ್ನು ಪಡೆಯಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಭರವಸೆ ನೀಡಿದರು.
ಜೊತೆಗೆ ಉತ್ತಮ ಗುಣಮಟ್ಟದ ಬೀಜ , ಕಡಿಮೆ ಬಾಡಿಗೆಯಲ್ಲಿ ಯಂತ್ರೋಪಕರಣ ಹಾಗೂ ನರ್ಸರಿ ಭತ್ತದ ಕೃಷಿಗೆ ಬೇಕಾದ ಸಕಲ ವ್ಯವಸ್ಥೆ ಗಳನ್ನು ಕೃಷಿ ಇಲಾಖೆ ಮಾಡಲು ಸಿದ್ದವಿದೆ ಎಂದು ಅವರು ತಿಳಿಸಿದರು.
ಬಂಟ್ವಾಳ ಕೃಷಿ ಸಹಾಯಕ ನಿರ್ದೇಶಕ ಚನ್ನಕೇಶವ ಮೂರ್ತಿ ಮಾತನಾಡಿ, ಇಲಾಖೆಯಲ್ಲಿ ಲಭ್ಯವಿರುವ `ಕೂರಿಗೆ’ ಯಂತ್ರದ ಮೂಲಕ ಅತಿ ಸುಲಭವಾಗಿ ಭತ್ತದ ಬೀಜ ಬಿತ್ತನೆ ಮಾಡಬಹುದು. ಬೀಜ ಮತ್ತು ರಸಗೊಬ್ಬರ ಮಿಶ್ರಣ ಮಾಡಿ ಯಂತ್ರದಲ್ಲಿ ಸೇರಿಸಿ ಭೂಮಿಯಲ್ಲಿ ನೇರವಾಗಿ ಬಿತ್ತನೆ ಕಾರ್ಯ ನಡೆಸಬೇಕು. ಸಾಂಪ್ರದಾಯಿಕವಾಗಿ ಎಕ್ರೆಗೆ ೨೫ರಿಂದ ೩೦ ಕೇಜಿ ಕಜೆ ಭತ್ತ ಬಳಕೆ ಮಾಡಬೇಕಿದ್ದರೆ ಈ ಯಂತ್ರದ ಮೂಲಕ ಪ್ರತಿ ಎಕ್ರೆಗೆ ಕೇವಲ ಎಂಟು ಕೇಜಿ ಭತ್ತ ಹಾಕಿದರೆ ಸಾಕಾಗುತ್ತದೆ. ಈ ಪದ್ಧತಿಯಲ್ಲಿ ಬೀಜ ಉಳಿತಾಯವಾಗಲಿದೆ ಎಂದರು.
ಹೊಸ ಪದ್ಧತಿಯಲ್ಲಿ ಭತ್ತದ ಬೇಸಾಯಕ್ಕೆ ಉತ್ತೇಜನ ನೀಡಲೆಂದು ರೈತರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಕೂರಿಗೆ ಯಂತ್ರ ಒದಗಿಸುತ್ತದೆ. ಈ ಯಂತ್ರದ ಮೂಲಕ ಸಕಾಲದಲ್ಲಿ ಬಿತ್ತನೆ ನಡೆಸಬಹುದು. ಕಡಿಮೆ ಕರ್ಚಿನ ಈ ಪದ್ಧತಿಯ ಭತ್ತ ಬೇಸಾಯದಲ್ಲಿ ರೈತರಿಗೆ ಹೆಚ್ಚು ಆದಾಯ ಬರುತ್ತದೆ ಎಂದು ಮೂರ್ತಿ ಹೇಳಿದರು.ಎಲ್ಲ ತಾಲೂಕಿನ ಹೋಬಳಿ ರೈತ ಸಂಕರ್ಪ ಕೇಂದ್ರದಲ್ಲಿ ಈ ಯಂತ್ರ ಹಾಗೂ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಲಭ್ಯವಿದೆ. ರೈತರು ಹೆಚ್ಚೆಚ್ಚಾಗಿ ಈ ಪದ್ಧತಿಯ ಬೇಸಾಯ ಮಾಡಿ ಪುನಾ ಹಡೀಲು ಭೂಮಿಯಲ್ಲಿ ಉತ್ತಮ ಭತ್ತದ ಬೇಸಾಯ ಮಾಡಲು ಸಾಧ್ಯವಿದೆ ಎಂದರು.
ಪ್ರಾತ್ಯಕ್ಷಿಕೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆ, ಉಪಾಧ್ಯಕ್ಷ ವೆಂಕಟೇಶ ನಾವಡ, ಮಾಜಿ ತಾಪಂ ಸದಸ್ಯ ಯಶವಂತ ಪೂಜಾರಿ,ನಿರ್ದೇಶಕ ದೇವದಾಸ್ ಹೆಗ್ಡೆ ಸಿಒ.ವಿಜಯರವಿ ಪೆರ್ನಾಂಡಿಸ್, ಅಮ್ಮುಂಜೆ,ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಕರಿಯಂಗಳ ಕೃಷಿಕ ರಾಜು ಪೂಜಾರಿ, ಅಣ್ಣಿ ಪೂಜಾರಿ, ಕಿಶೋರ್ ಪಲ್ಲಿಪಾಡಿ,ಪ್ರಸಾದ್ ಮಲ್ಲಿ, ಸುನೀಲ್ ರೈ, ಸ್ಟ್ಯಾನಿ ಲೋಬೊ, ಕೃಷಿ ತಾಂತ್ರಿಕ ಅಧಿಕಾರಿ ಹನುಮಂತಪ್ಪ, ಹಾಗೂ ಕರಿಯಂಗಳ ಮತ್ತು ಅಮ್ಮುಂಜೆಯ ಕೃಷಿಕರು ಉಪಸ್ಥಿತರಿದ್ದರು.
