ಮೂಡುಬಿದಿರೆ: ಪ್ರಕರಣವೊಂದರಲ್ಲಿ ಬಂಧಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹರಿಬಿಟ್ಟು ನನ್ನ ವೈಯಕ್ತಿಕ ತೇಜೋವಧೆ ಮಾಡಿರುವ ಹಿಂದೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಇತರ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಶರಣ್ ಪಂಪ್‌ವೆಲ್ ಈ ಹಿಂದೆ ನನಗೆ ಕೊಲೆ ಬೆದರಿಕೆ ಒಡ್ಡಿದ್ದರು. ಶಾಸಕ ಕೋಟ್ಯಾನ್‌ರ ಓರ್ವ ಪರಮಾಪ್ತ ಹಾಗೂ ಶರಣ್ ಪಂಪುವೆಲ್ ಆಪ್ತ ದರೆಗುಡ್ಡೆ ಮೂಲದ ರೌಡಿಶೀಟರ್‌ನ ಮೂಲಕ ಜೀವ ಬೆದರಿಕೆ ಒಡ್ಡಲಾಗಿತ್ತು. ಪ್ರಕರಣದಲ್ಲಿ ಶಾಸಕರ ಕೈವಾಡ ಇರುವುದು ಗಮನಕ್ಕೆ ಬಂದಿದೆ. ಆ ಬಳಿಕ ಕ್ಷುಲಕ ಪ್ರಕರಣವೊಂದನ್ನು ಮುಂದಿಟ್ಟು ಸಿಸಿಬಿ ಪೊಲೀಸರು ಸುಳ್ಳು ಹೇಳಿ ನನ್ನನ್ನು ಬಂಧಿಸಿದ್ದಾರೆ. ಠಾಣೆಗೆ ಕರೆದೊಯ್ದ ಸ್ವಲ್ಪ ಹೊತ್ತಿನಲ್ಲೇ ದೊಡ್ಡ ಕ್ರಿಮಿನಲ್ ಎನ್ನುವ ರೀತಿ ಬಿಂಬಿಸಿ ಸ್ಥಳೀಯ ವೆಬ್ ಸೈಟ್ ನಲ್ಲಿ ಸುದ್ದಿ ಬಿತ್ತರವಾಗಿದೆ. ಇವೆಲ್ಲವೂ ರಾಜಕೀಯ ಧ್ವೇಷದಿಂದ ನಡೆದಿದೆ ಎಂದು ಅವರು ಆರೋಪಿಸಿದರು.
ಮಿಥುನ್ ರೈ ವಿರುದ್ಧ ಅವಾಚ್ಯ ನಿಂದನೆಯನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರೂ ಕನಿಷ್ಠ ಪ್ರಕರಣ ದಾಖಲಾಗಿಲ್ಲ. ಜಾರಕಿಹೊಳಿ ಸಹಿತ ಯಾವ ಬಿಜೆಪಿ ಕಾರ್ಯಕರ್ತರನ್ನು ಮುಟ್ಟುವ ಧೈರ್ಯವಿಲ್ಲದ ಪೊಲೀಸರು ಬಿಜೆಪಿ ಪಕ್ಷದ ರಾಜಕೀಯ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ. ನಾನು ಶರಣ್ ಪಂಪುವೆಲ್ ಬಗೆಗಿನ ವೀಡಿಯೋ ರವಾನಿಸಿದ್ದೇನೆ ಎನ್ನುವ ಏಕೈಕ ಕಾರಣಕ್ಕಾಗಿ ಪೊಲೀಸರು ಮೋಸದಿಂದ ಬಂಧಿಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ವಿಚಾರಣೆ ಎಂದು ಬರ ಹೇಳಿ ಮಂಗಳೂರಿಗೆ ಕರೆದೊಯ್ದಿದ್ದಾರೆ. ನನ್ನ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ಮುಗಿಸಲು ಈ ಷಡ್ಯಂತ್ರ ನಡೆದಿದೆ ಎಂದರು.
ಶರಣ್ ಪಂಪುವೆಲ್ ಕೊಲೆ ಬೆದರಿಕೆಯ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ. ನನ್ನ ವಿರುದ್ಧ ತೇಜೋವಧೆ ನಡೆಸಿದ ಬಿಜೆಪಿ ಪ್ರೇರಿತ ಜಾಲತಾಣಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.ವಕೀಲ ಇರ್ಷಾದ್ ಎಲ್.ಜಿ, ಯುವ ಕಾಂಗ್ರೆಸ್ ಮುಖಂಡ ಸುಚಿನ್ ಮಡಿವಾಳ. ನಿತಿನ್ ಬೆಳುವಾಯಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
