ಮುಂಬಯಿ : ಮಂಗಳೂರು ಇಲ್ಲಿನ ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಮಾರೋಪ ಸಮಾರಂಭ ಎ.೧೩ ರಂದು ಸೋಮವಾರ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಅ| ವ| ಬಿಷಪ್ ಡಾ| ಪೀಟರ್ ಪೌಲ್ ಸಲ್ಡಾನ ಅವರ ನೇತೃತ್ವದಲ್ಲಿ ಪವಿತ್ರ ಕೃತಜ್ಞತಾ ಪೂಜೆ, ಪ್ರಾರ್ಥನಾ ವಿಧಿಯೊಂದಿಗೆ ನಡೆಸಲಾಯಿತು.
ಶತಮಾನೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜ್ನ ಹಳೆ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಜರ್ಮನಿಯ ರುಹ್ರ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ| ಅಂಜನಾ ದೇವಿ ಉಪಸ್ಥಿತರಿದ್ದು ಮಾತನಾದಿ ಶಿಕ್ಷಣವೇ ಪ್ರಪಂಚವನ್ನು ಬದಲಾಯಿಸುವ ಆಯುಧ. ಸತತ ಪರಿಶ್ರಮ ಮತ್ತು ಶ್ರದ್ಧೆಯೇ ಸಾಧನೆಗೆ ದಾರಿ. ಯುವ ವಿಜ್ಞಾನಿಗಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕೆಂದು, ಹಾಗೆಯೇ ಇಂತಹ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕಲಿಯುವವರೇ ಭಾಗ್ಯವಂತರೆಂದು ಭಾವನಾತ್ಮಕವಾಗಿ ಎಂದರು. ಆಪೋಸ್ತೊಲಿಕ್ ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಅಧಿಕಾರಿಣಿ ವಂ| ಭಗಿನಿ ಸಿ| ಶಮಿತಾ ಎ.ಸಿ ಅವರು ಪೋಪರ ಸಂದೇಶ ವಾಚಿಸಿ ಅನುಗ್ರಹಿಸಿ ವಿಶ್ರಾಂತ ಪ್ರಾಚಾರ್ಯರುಗಳ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿದರು.
ಸನ್ಮಾನಿತರ ಪರವಾಗಿ ಡಾ| ಸಿಸ್ಟರ್ ಜೆಸ್ವೀನಾ ಮಾತನಾಡಿದರು. ಶತಮಾನದ ನೆನಪಿನ ಕುರುಹಾಗಿ ಪ್ರಕಾಶಿಸಿದ ಸ್ಮರಣ ಸಂಚಿಕೆಯನ್ನು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅನಾವರಣಗೊಳಿಸಿ ಕಾಲೇಜಿನ ಹಿರಿಮೆ ಗರಿಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಶಾಸಕ ಜೆ.ಆರ್.ಲೋಬೊ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಾ| ಲಿಡಿಯಾ ಫೆರ್ನಾಂಡಿಸ್, ಡಾ| ದೇವಿಪ್ರಭ ಆಳ್ವ ಹಾಗೂ ಮೀರಾ ಅರಾನ್ಹಾ, ಎಂಸಿಸಿ ನಗರ ಸೇವಕ ನವೀನ್ ಆರ್ ಡಿಸೋಜಾ ಉಪಸ್ಥಿತರಿದ್ದರು.
ಆಪೋಸ್ತೊಲಿಕ್ ಕಾರ್ಮೆಲ್ ಸಂಸ್ಥೆಯ ಸುಪೀರಿಯರ್ ಜನರಲ್ ವಂ| ಸಿಸ್ಟರ್ ಮರಿಯ ನಿರ್ಮಲಿನಿ ಅಧ್ಯಕ್ಷೀಯ ಭಾಷಣ ಮಾಡಿ ಕಾಲೇಜು ಇತಿಹಾಸ ಸಂಚಿಕೆ ಬಿಡುಗಡೆಗೊಳಿಸಿ ಆತ್ಮಸ್ಥೈರ್ಯ ಮೈಗೂಡಿಸಿ ಕೊಂಡು, ಮುಂದಿನ ಭವಿಷ್ಯದ ಕಡೆ ದೃಷ್ಟಿ ಹರಿಸಬೇಕು ಎಂದರು. ಕೃತಿ ರಚನಾಕರ್ತೆಯರಾದ ಭಗಿನಿ ಸಿ| ಸಿಲ್ವೆಟ್ ಹಾಗೂ ಸಿ| ಡಾ| ಜೆಸ್ವೀನಾ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗಿದ್ದು, ಹಳೆವಿದ್ಯಾರ್ಥಿನಿ ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳ ಅವಿರತ ಶ್ರಮವನ್ನು ಸ್ಮರಿಸಿ ಗೌರವಿಸಲಾಯಿತು.
ಕಾಲೇಜು ವಿಭಾಗದ ಪ್ರಾಚಾರ್ಯೆ ಸಿಸ್ಟರ್ ಡಾ| ವೆನಿಸ್ಸಾ ಎ.ಸಿ ಸ್ವಾಗತಿಸಿದರು. ಸಮೂಹ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯದೊಂದಿಗೆ ಸ್ವಾಗತ ಕೋರಲಾಯಿತು. ಕಾಲೇಜು ನಡೆದು ಬಂದ ಹಾದಿಯ ಕುರಿತಾಗಿ ಸಾಕ್ಷ್ಯಾ ಚಿತ್ರ ಪ್ರದರ್ಶನ ನಡೆಯಿತು. ಉಪನ್ಯಾಸಕರಾದ ಮಾಳವಿಕ ಹಾಗೂ ಪ್ರಮೀಳಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಕು| ಹೆನ್ರಿಕಾ ಹಾಗೂ ಕು| ಪ್ರೀತಿ ವಿದ್ಯಾರ್ಥಿ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ವಿಭಾಗದ ಪ್ರಾಚಾರ್ಯೆಸಿಸ್ಟರ್ ನೋರಿನ್ ಡಿಸೋಜಾ ವಂದಿಸಿದರು. ಸಂಸ್ಥಾಪಕಿ ಮದರ್ ಮೇರಿ ಅಲೋಷಿಯಾ ಅವರ ಬಗ್ಗೆ ನೃತ್ಯ ರೂಪಕ ಪ್ರದರ್ಶಿಸಲಾಗಿದ್ದು ಶತಮಾನೋತ್ಸವ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಕೋವಿಡ್ ನಿಯಮಕ್ಕನುಸಾರವಾಗಿ ಹೆಚ್ಚು ಜನಸಂದಣಿಗೆ ಅನುವು ನೀಡದೆ ಕಾರ್ಯಕ್ರಮದ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮುಖಾಂತರ ಬಿತ್ತರಿಸಲಾಯಿತು.
