ಮುಂಬಯಿ : ಮನುಷ್ಯ ಎಷ್ಟೇ ದೊಡ್ಡವನಾಗಿರಬಹುದು ಆದರೆ ಆತನ ಯೋಚನೆ ಚಿಂತನೆ ಆತನ ಸಹೋದ್ಯೋಗಿಯನ್ನು ತಲುಪಬಾರದು. ನಾಟಕರಂಗದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಎಲ್ಲಾ ಕಲಾವಿದರ ಪ್ರತಿಭೆಯನ್ನು ಹೊರಹೊಮ್ಮಿಸುವ ನಿರ್ದೇಶಕನಾದವ ತನ್ನ ಸೃಜನಶೀಲತೆಯನ್ನು ಬಳಸಿಕೊಳ್ಳಬೇಕು. ಗಿರೀಶ್ ಕಾರ್ನಾಡ್ ಬರೆದದ್ದು ತುಘಲಕ್ ಕಾದಂಬರಿ ನಾಟಕವಲ್ಲ. ಕೆ.ಕೆ ಸುವರ್ಣರು ಅದನ್ನು ನಾಟಕವಾಗಿ ಬರೆಯಬೇಕೆಂದು ಒತ್ತಡ ಹಾಕಿದ ಪರಿಣಾಮ ತುಘಲಕ್ ಇಂದು ಅತ್ಯುತ್ತಮ ನಾಟಕವಾಗಿ ನಮಗೆ ದೊರೆತಿದೆ ಎಂದು ಹಿರಿಯ ರಂಗಕಲಾವಿದ, ಕಂಠದಾನ ಕಲಾವಿದ ಜಯಶೀಲ ಸುವರ್ಣ ಅಭಿಪ್ರಾಯ ಪಟ್ಟರು.

ಬೃಹನ್ಮುಂಬಯಿಯಲ್ಲಿನ ಹಿರಿಯ ರಂಗಸಂಸ್ಥೆ ಕನ್ನಡ ಕಲಾ ಕೇಂದ್ರವು ಕಳೆದ ಶನಿವಾರ ಸಯಾನ್ ಇಲ್ಲಿನ ಸಂಘದ ಕಿರು ಸಭಾಗೃಹದಲ್ಲಿ ಆಯೋಜಿಸಿದ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ರಂಗಾನುಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಜಯಶೀಲ ಮಾತನಾಡಿದರು. ನಾನೆಂದೂ ಇದು ನಾಟಕ ಆಗುತ್ತದೆ ಎಂದು ಭಾವಿಸಲಿಲ್ಲ ಎಂಬ ಗಿರೀಶ್ ಕಾರ್ನಾಡ್ ಅವರ ಮಾತನ್ನು ನೆನಪಿಸುತ್ತಾ ಹಿಂದಿನ ಪ್ರೇಕ್ಷಕ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ನಾಟಕವನ್ನು ಮನೆಯಲ್ಲೇ ಕುಳಿತು ನೋಡಬಲ್ಲ.
ಆದ್ದರಿಂದ ಇಂದಿನ ನಿರ್ದೇಶನದ ಅತ್ಯುತ್ತಮ ನಾಟಕವನ್ನು ರಂಗದ ಮೇಲೆ ತರಬೇಕು. ಒಳ್ಳೆಯ ನಾಟಕವನ್ನು ನೋಡುವಂತೆ ಕೆಟ್ಟ ನಾಟಕವನ್ನು ನೋಡಬೇಕು. ಇದು ಬೆಳವಣಿಗೆ ಸಹಕಾರಿ ಆಗುತ್ತದೆ ಎಂದೂ ಜಯಶೀಲ ಅವರು ಮಾರ್ಚ್ 28ರಂದು ತಿಳಿಸಿದರು. ರಂಗಾನುಭವದಲ್ಲಿ ಪ್ರಶಸ್ತಿ ವಿಜೇತ ಹಿರಿಯ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ, ಡಾ| ಜಿ.ಪಿ ಕುಸುಮಾ, ನವೀನ್ ಶೆಟ್ಟಿ ಇನ್ನಬಾಳಿಕೆ, ಗೀತಾ ಎಲ್.ಭಟ್, ಗೋಪಾಲ್ ತ್ರಾಸಿ ಹಾಗೂ ಜಗದೀಶ್ ಡಿ.ರೈ ಅತಿಥಿಗಳಾಗಿದ್ದು ತಮ್ಮ ರಂಗ ಬದುಕಿನಲ್ಲಿ ಅನುಭವಿಸಿದ ಅನುಭವಗಳ ಬಗ್ಗೆ ಮಾತನಾಡಿದರು.
ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾತಿ ಮತ ಧರ್ಮಭಾಷೆ, ಶ್ರೀಮಂತ ಬಡವ ಎಂಬ ಗಡಿಗಳನ್ನು ಮೀರಿ ನಿಂತಿದೆ ರಂಗಭೂಮಿ. ರಂಗಭೂಮಿಗೆ ಸೀಮಿತವಾಗಿರುವ ಕನ್ನಡ ಕಲಾಕೇಂದ್ರ ಪ್ರಥಮವಾಗಿ ವಿಶ್ವರಂಗಭೂಮಿ ದಿನಾಚರಣೆ ಆಚರಿಸುತ್ತಿದೆ. ಆ ಮೂಲಕ ಮುಂಬಯಿ ರಂಗಭೂಮಿಯಲ್ಲಿ ಹೊಸ ಸಂಚಲನವೊಂದನ್ನು ಉಂಟುಮಾಡಿದೆ. ಇಂತಹ ಕಾರ್ಯಕ್ರಮಗಳು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.
ಮುಂದೆ ನಮ್ಮ ಯೋಜನೆಯಂತೆ ಮುಂಬಯಿ ರಂಗ ನಿರ್ದೇಶಕರಿಂದಲೇ ಮುಂಬಯಿ ಕಲಾ ಸಂಘಟನೆಗಳಿಂದಕನಿಷ್ಠ ಐದು ನಾಟಕಗಳೊನ್ನೊಳಗೊಂಡ ನಾಟಕ ಉತ್ಸವ ಆಯೋಜಿಸಲಾಗುವುದು ಎಂದರು. ಅರ್ಥಪೂರ್ಣವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಕಂಬಾರ ಅವರ ಮಹಾಮಾಯಿ ನಾಟಕದ ತಾಯಿ ವಿನಾ ಮಗ ಎಂಬ ದೃಶ್ಯವನ್ನು ಗಣೇಶ್ ಕುಮಾರ್ ಮತ್ತು ಸಾ.ದಯಾ ವಾಚಿಸಿದರು.ಕೇಂದ್ರದ ಸದಸ್ಯ ಬೀಮರಾಯ ಚಿಲ್ಕ ಸ್ವಾಗತಿಸಿದರು. ಯಕ್ಷಗಾನ ಕಲಾವಿದ, ಕೇಂದ್ರದ ಗೌ| ಪ್ರ| ಕಾರ್ಯದರ್ಶಿ ರಮೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
