ಹಳೆಯಂಗಡಿ: ಇಲ್ಲಿಗೆ ಸಮೀಪದ ಎಸ್ಕೋಡಿ ಜಂಕ್ಷನ್ನಲ್ಲಿ ಬೈಕ್ ಮತ್ತು ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರನ ಕಾಲು ತುಂಡಾದ ಘಟನೆ ಸೋಮವಾರ ರಾತ್ರಿ 9 ಗಂಟೆಗೆ ಸಂಭವಿಸಿದೆ.


ಎಸ್ಕೋಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು ಹೆಸರು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಘಟನೆಯ ವಿವರ: ಎಸ್ಕೋಡಿ ಜಂಕ್ಷನ್ ಸಮೀಪ ಸವಾರ ಬೈಕ್ನಲ್ಲಿ ಆಗಮಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ರಿಕ್ಷಾ ಈತನ ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಅಪಾಯ ಸಂಭವಿಸುತ್ತಿದ್ದಂತೆ ಬೈಕ್ಸವಾರ ಬೈಕ್ನಿಂದ ಹಾರಿದ್ದನೆನ್ನಲಾಗಿದ್ದು, ಹಾರಿದ ರಭಸಕ್ಕೆ ರಿಕ್ಷಾದ ಒಳಗಡೆ ಬಿದ್ದಿದ್ದಾನೆನ್ನಲಾಗಿದೆ. ಘಟನೆಯಿಂದ ಬೈಕ್ಸವಾರನ ಕಾಲು ತುಂಡಾಗಿದ್ದು, ಸಾರ್ವಜನಿಕರು ತಕ್ಷಣ ಆತನನ್ನು ಮುಕ್ಕಾ ಆಸ್ಪತ್ರೆಗೆ ದಾಖಲಿಸಿದ್ದಾರೆೆ.
ಎಸ್ಕೋಡಿ ಜಂಕ್ಷನ್ ಅಪಾಯಕಾರಿ ರಸ್ತೆಯಾಗಿದ್ದು, ಇಲ್ಲಿ ಇದೇ ರೀತಿ ಅಪಘಾತಗಳ ಸರಮಾಲೆ ನಡೆಯುತ್ತಲೇ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
