ಬಂಟ್ವಾಳ: ಖಾಸಗಿ ದೇವಾಲಯಗಳನ್ನೆಲ್ಲ ಕರ್ನಾಟಕ ಸರ್ಕಾರ ವಶಕ್ಕೆ ಪಡೆಯುವ ಹುನ್ನಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು, ಆ ವಿಚಾರದ ಪ್ರಸ್ತಾಪವೇ ಇಲ್ಲ ಎಂದು ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಸ್ಪಷ್ಟಪಡಿಸಿದ್ದಾರೆ.
ಕೆಲವೊಂದು ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ, ಸಂದೇಶಗಳು ರವಾನೆಯಾಗುತ್ತಿದ್ದು, ಇದು ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಸರ್ಕಾರದ ಬಳಿ ಧಾರ್ಮಿಕ ದತ್ತಿಗೆ ಒಳಪಡುವ ದೇವಸ್ಥಾನಗಳಲ್ಲದೆ, ಖಾಸಗಿ ದೇವಸ್ಥಾನಗಳ ಕುರಿತ ಮಾಹಿತಿ ಸಂಗ್ರಹಗಳನ್ನು ಮಾಡುವುದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಈ ವದಂತಿ ಹಬ್ಬಿಸಲಾಗುತ್ತಿದೆ. ಹಿಂದು ಧಾರ್ಮಿಕ ದತ್ತಿ ಇಲಾಖೆ ಹಿಂದುಗಳ ಹಿತರಕ್ಷಣೆ ಮಾಡುತ್ತೇವೆಯೇ ವಿನಃ ಖಾಸಗಿ ದೇವಾಲಯಗಳನ್ನು ಸರ್ಕಾರದ ವಶಕ್ಕೆ ಪಡೆಯುವುದಿಲ್ಲ.
ಅಂಥ ತೀರ್ಮಾನವನ್ನು ರಾಜ್ಯದ ಧಾರ್ಮಿಕ ಪರಿಷತ್ತು ತೆಗೆದುಕೊಳ್ಳಲಿಲ್ಲ, ಸಚಿವರೂ ತೆಗೆದುಕೊಳ್ಳಲಿಲ್ಲ. ಹಿಂದುಗಳ ದೇವಾಲಯಗಳ ರಕ್ಷಣೆಗೆ ಕಟಿಬದ್ಧವಾಗಿದ್ದೇವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
