ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ೬ರಂದು ಮಧ್ಯಾಹ್ನ ೨.೩೦ ಗಂಟೆಗೆ ಸಮ್ಮೇಳನದ ಪೂರ್ವಭಾವಿಯಾಗಿ ಸ್ವಾಗತ ಸಮತಿ ಸಭೆ ಕರೆಯಲಾಗಿದೆ ಎಂದು ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಹೇಳಿದ್ದಾರೆ.ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲ್ಲಿನ ಕೈಕುಂಜೆ ಮುಖ್ಯ ರಸ್ತೆ ಬಳಿ ರೂ ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕನ್ನಡ ಭವನ ಫೆ ೨೦ರಂದು ಉದ್ಘಾಟನೆಗೊಂಡು ಫೆ.೨೧ರಂದು ತಾಲ್ಲೂಕು ಮಟ್ಟದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ೩೭೫ ಮಂದಿ ಒಳಗೊಂಡ ಸ್ವಾಗತ ಸಮಿತಿ ರಚಿಸಿ ಇವರಿಗೆ ಕನ್ನಡ ಶಾಲು ಸಹಿತ ಆಹ್ವಾನ ಪತ್ರ ರವಾನಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಸಮ್ಮೇಳನ ಉದ್ಘಾಟಿಸಲಿದ್ದು, ರಾಜ್ಯಮಟ್ಟದ ಪುಸ್ತಕ ಪ್ರದರ್ಸನ ಮತ್ತು ಮಾರಾಟ ಹಾಗೂ ಆಕರ್ಷಕ ಮೆರವಣಿಗೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಕನ್ನಡ ಭಾರತಿ ಭಾಷಾ ಪ್ರಾಧಿಕಾರ ಅಧ್ಯಕ್ಷ ಡಾ.ಅಜೆಕ್ಕಳ ಗಿರೀಶ ಭಟ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಹಿತ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮತ್ತಿತರ ಗಣ್ಯರನ್ನು ಆಹ್ವಾನಿಸಲಾಗಿದೆ. ಸಮ್ಮೇಳದ ಯಶಸ್ವಿಗೆ ಹಲವು ಉಪ ಸಮಿತಿ ರಚಿಸಲಾಗಿದ್ದು, ಸ್ಮರಣ ಸಂಚಿಕೆ ಸಹಿತ ಹಲವು ಕೃತಿ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪ್ರಮುಖರಾದ ಎ.ಸಿ.ಭಂಡಾರಿ, ಸುದರ್ಶನ್ ಜೈನ್, ಕೊಳಕೆ ಗಂಗಾಧರ ಭಟ್, ಜಯಾನಂದ ಪೆರಾಜೆ, ಅಬ್ಬಾಸ್ ಆಲಿ, ಸರಪಾಡಿ ಅಶೋಕ ಶೆಟ್ಟಿ, ಮಹಾಬಲೇಶ್ವರ ಹೆಬ್ಬಾರ್, ಶಿವಶಂಕರ್, ಡಿ.ಬಿ.ಅಬ್ದುಲ್ ರಹಿಮಾನ್, ಉಮ್ಮರ್ ಮಂಚಿ, ರಮಾನಂದ ನೂಜಿಪಾಡಿ, ಕೃಷ್ಣ ಶರ್ಮ, ಕೆ.ಎನ್.ನಾಗೇಶ ರಾವ್ ಮತ್ತಿತರರು ಇದ್ದರು.
