ಬಂಟ್ವಾಳ:ಕಂಬಳ ಕ್ರೀಡೆಗೆ ಹೆಚ್ಚಿನ ಪ್ರಚಾರ ನೀಡಿ ಅದನ್ನು ಅಂತರ್ ರಾಷ್ಟ್ರೀಯ ಕ್ರೀಡೆಯಾಗಿ ರೂಪಿಸಬೇಕಾಗಿದೆ. ಇಲ್ಲಿನ ಕಂಬಳಕ್ಕೆ ವೈಯಕ್ತಿಕ ನೆಲೆಯಲ್ಲಿ ರೂ ೧೧ಲಕ್ಷ ಮೊತ್ತ ನೀಡುತ್ತಿದ್ದು, ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಮುಂದಿನ ಕಂಬಳಕ್ಕೆ ಸರ್ಕಾರದಿಂದ ಅನುದಾನ ಒದಗಿಸುವುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಶನಿವಾರ ರಾತ್ರಿ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಅವರು ಮಾತನಾಡಿದರು.ಕೋಣದ ಜೊತೆ ಓಡುವುದು ಅಸಾಮಾನ್ಯ ಸಾಧನೆಯಾಗಿದ್ದು, ಅಂತರ್ ರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಮಾನ ಓಟಗಾರರು ಕಂಬಳ ಕ್ಷೇತ್ರದಲ್ಲಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದರು. ಜಿಲ್ಲೆಯಲ್ಲಿ ಮೂಲನಂಬಿಕೆ ಮತ್ತು ಸಾಂಪ್ರದಾಯಿಕವಾಗಿ ನಡೆಯುವ ಕಂಬಳಕ್ಕೆ ಸಮಯದ ಮಿತಿ ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಮಾತುಕತೆ ನಡೆಸಿ ರಾತ್ರಿಯಿಡೀ ಕಂಬಳ ನಡೆಸಲು ಸೂಚಿಸುವುದಾಗಿ ತಿಳಿಸಿದರು.
ಶಾಸಕರಾದ ರಾಜೇಶ್ ನಾಯ್ಕ್, ಹರೀಶ್ ಪೂಂಜ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್,ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಶಶಿಕಾಂತ್ ಸವದಿ, ಧೀರಜ್ ಎಂ.ಪ್ರಸಾದ್ ಇದ್ದರು.
ಇದೇ ವೇಳೆ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಓಟಗಾರ ಶ್ರೀನಿವಾಸ ಗೌಡ, ಸುರೇಶ್ ಎಂ. ಶೆಟ್ಟಿ, ಪ್ರವೀಣ್ ಕೋಟ್ಯಾನ್ ಇವರನ್ನು ಸಚಿವರು ಸನ್ಮಾನಿಸಿದರು.ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ತೀರ್ಪುಗಾರ ಗುಣಪಾಲ ಕಡಂಬ ವಂದಿಸಿದರು. ಒಟ್ಟು ೧೬೭ ಜೊತೆ ಕೋಣಗಳು ಭಾಗವಹಿಸಿದ್ದವು
