ಬಂಟ್ವಾಳ:ದೇಶದಲ್ಲಿ ಕಳೆದ ೭೩ ವರ್ಷಗಳ ಕುಡಿಯುವ ನೀರಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ಮಂಗಳೂರಿಗೆ ರೂ ೧೪೦ ಕೋಟಿ ಮತ್ತು ಬಂಟ್ವಾಳ ಕ್ಷೇತ್ರಕ್ಕೆ ರೂ ೬೦ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಕೂಡಲೇ ಶಿಲಾನ್ಯಾಸ ನೆರವೇರಿಸುವುದಾಗಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ರೂ ೬೨ಲಕ್ಷ ವೆಚ್ಚದ ನರಿಕೊಂಬು ಮತ್ತು ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಮೂರು ವರ್ಷದೊಳಗೆ ‘ಜಲ ಗಂಗೆ’ ಯೋಜನೆಯಡಿ ರಾಜ್ಯದ ಪ್ರತೀ ಮನೆಗೆ ನಳ್ಳಿ ನೀರು ಒದಗಿಸಲಾಗುವುದು. ಈಗಾಗಲೇ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರವು ರೂ ೮೦೦ ಕೋಟಿ ಮೊತ್ತದ ಅನುದಾನ ನೀಡಿದ್ದು, ಅರ್ಹ ಫಲಾನುಭವಿಗಳಿಗೆ ವಾರ್ಷಿಕ ೧೦೦ ದಿನಗಳ ಬದಲಾಗಿ ೧೫೦ ದಿನ ಉದ್ಯೋಗ ಒದಗಿಸಲು ಸಾಧ್ಯವಾಗಲಿದೆ. ಒಟ್ಟು ೫೬೦೦ ಕಿ.ಮೀ.ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗೆ ಅನುದಾನ ಸಿಕ್ಕಿದೆ ಎಂದರು. ಮುಖ್ಯಮಂತ್ರಿ ಬಿಎಸ್ ವೈ ಒಳ್ಳೆಯ ಆಡಳಿತ ನೀಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪಕ್ಷ ಸಂಘಟನೆ ಮಾಡುತ್ತಿದ್ದಾರೆ.
ರಾಮನ ಹೆಸರು ಇಟ್ಟುಕೊಂಡ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮಾಜಿ ಸಚಿವ ರಮಾನಾಥ ರೈ ನಿದ್ದೆಯಿಂದ ಎದ್ದಾಗ ಅಭಿವೃದ್ಧಿಗೆ ಅನಗತ್ಯ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಜನತೆಗೆ ನೀರು ಹರಿಸುವ ಬದಲಾಗಿ ಗೋವಿನ ರಕ್ತ ಹರಿಸಿದ್ದಕ್ಕೆ ಜನತೆ ಅವರನ್ನು ಸೋಲಿಸಿದ್ದು, ಸೋತರೂ ಬುದ್ಧಿ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಇವರಿಗೆ ಇಡಗಂಟು ಕೂಡಾ ವಾಪಾಸು ಸಿಗಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ರಾಜಧರ್ಮ ಪಾಲಿಸುವ ಮೂಲಕ ಶಾಸಕರ ರಾಜೇಶ ನಾಯ್ಕ್ ಆದರ್ಶ ರಾಜಕಾರಣ ಮಾಡುತ್ತಿದ್ದಾರೆ ಎಂದರು.ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ರವೀಂದ್ರ ಕಂಬಳಿ, ಮಂಜುಳಾ ಮಾಧವ ಮಾವೆ, ಕಮಲಾಕ್ಷಿ ಪೂಜಾರಿ, ಸಿಇಒ ಡಾ.ಸೆಲ್ವಮಣಿ ಆರ್.ಎಂ., ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಬಾಬು ಇದ್ದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ.ಇಒ ರಾಜಣ್ಣ ಸ್ವಾಗತಿಸಿ, ತಾರನಾಥ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
