ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಕೈಕುಂಜೆ ಮುಖ್ಯರಸ್ತೆ ಬಳಿ ರೂ ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕನ್ನಡ ಭವನ ಕಟ್ಟಡ ಫೆ.೨೦ರಂದು ಉದ್ಘಾಟನೆಗೊಳ್ಳಲಿದ್ದು, ಫೆ.೨೧ರಂದು ರಾಜ್ಯಮಟ್ಟದ ಪುಸ್ತಕ ಮೇಳ ಸಹಿತ ತಾಲೂಕು ಮಟ್ಟದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ದರಿಸಲಾಗಿದೆ ಎಂದು ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಶ್ರೀ ಅಣ್ಣಪೂರ್ಣೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡಾಭಿಮಾನಿಗಳು ಮತ್ತು ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಕನ್ನಡಭವನ ಕಟ್ಟಡವನ್ನು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕ ರಾಜೇಶ ನಾಯ್ಕ್ , ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರನ್ನು ಆಹ್ವಾನಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಇದೇ ವೇಳೆ ರಾಜ್ಯಮಟ್ಟದ ಪುಸ್ತಕ ಮೇಳ ಮತ್ತು ಮಾರಾಟ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಅಜೆಕ್ಕಳ ಗಿರೀಶ ಭಟ್ ಅಧ್ಯಕ್ಷತೆಯಲ್ಲಿ ಭಾಷಾಂತರಗಳಿಗೆ ಸಂಬAಧಿಸಿದ ವಿಷಯಗಳ ಬಗ್ಗೆ ಡಾ.ಸಿದ್ಧಲಿಂಗಯ್ಯ, ಪತ್ರಕರ್ತ ಜೋಗಿ ಮತ್ತು ಹಂಪಿ ವಿಶ್ವವಿದ್ಯಾನಿಲಯದ ಸುಬ್ಬಣ್ಣ ರೈ ಇವರಿಂದ ಪ್ರಬಂಧ ಮಂಡನೆ, ವಿವಿಧ ಗೋಷ್ಠಿ ಸಹಿತ ನಾಟಕ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣೈ, ಸಲಹಾ ಮಂಡಳಿ ಮಾರ್ಗದರ್ಶಕ ಎ.ಸಿ.ಭಂಡಾರಿ, ಕಟ್ಟಡ ಸಮಿತಿ ಸಂಚಾಲಕ ಕೊಳಕೆ ಗಂಗಾಧರ ಭಟ್, ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಕಾರ್ಯದರ್ಶಿ ಡಾ.ನಾಗವೇಣಿ ಮಂಚಿ, ಖಜಾಂಚಿ ಶಿವಶಂಕರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಮಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಪ್ರಮುಖರಾದ ಮಹಾಬಲೇಶ್ವರ ಹೆಬ್ಬಾರ್, ಸರಪಾಡಿ ಅಶೋಕ ಶೆಟ್ಟಿ, ವಿ.ಸು.ಭಟ್, ಡಿ.ಬಿ.ಅಬ್ದುಲ್ ರಹಿಮಾನ್, ಪಿ.ಎ.ರಹೀಂ, ಕಜೆ ರಾಮಚಂದ್ರ ಭಟ್, ರಮಾನಂದ ನೂಜಿಪಾಡಿ, ಉದಯ ಕುಮಾರ್ ಮಧ್ವ, ಪಿ.ಎನ್.ನಾಗೇಶ ರಾವ್, ರವಿ ಪಾಣೆಮಂಗಳೂರು, ಕೃಷ್ಣ ಶರ್ಮ, ಪತ್ರಕರ್ತ ಹರೀಶ ಮಾಂಬಾಡಿ, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.
