ಕಾಸರಗೋಡು: ಸಿರಿಯ ಮತ್ತು ಇರಾಕ್ನಲ್ಲಿ ಇತ್ತೀಚೆಗೆ ತಲೆಯೆತ್ತಿದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ‘ಐಸಿಸ್’ ಕೇರಳದಲ್ಲೂ ಕೆಲವು ಯುವಕರನ್ನು ನೇಮಕಾತಿ ಮಾಡಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ‘ರಾ’ ಶಂಕಿಸಿದೆ. ಈ ಆಘಾತಕಾರಿ ಮಾಹಿತಿಯನ್ನು ಕೇರಳ ಸರಕಾರಕ್ಕೆ ಹಸ್ತಾಂತರಿಸಿದೆ.

ಪಾಲ್ಘಾಟ್ ನಿವಾಸಿಯೋರ್ವ ನೇಮಕಾತಿಯ ಚುಕ್ಕಾಣಿ ಹಿಡಿದಿದ್ದು, ಆತನ ನೇತೃತ್ವದಲ್ಲಿ ಕೇರಳದ ಗುಪ್ತ ಕೇಂದ್ರವೊಂದರಲ್ಲಿ ಕೇರಳದ ಯುವಕರನ್ನು ಐಸಿಸ್ ನೇಮಕಾತಿ ಮಾಡಿದೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ರಾ’ ಸೇರಿದಂತೆ ಕೇಂದ್ರದ ಇತರ ಗುಪ್ತಚರ ವಿಭಾಗವು ಸಮಗ್ರ ತನಿಖೆ ನಡೆಸುತ್ತಿದೆ. ಉಗ್ರರ ಸಂಘಟನೆಗೆ ನೇಮಕಾತಿ ಚುಕ್ಕಾಣಿ ಹಿಡಿದಿರುವ ಪಾಲಾ^ಟ್ ನಿವಾಸಿ ಉಗ್ರನ ಪತ್ತೆಗೆ ರಾ ತೀವ್ರ ತನಿಖೆ ನಡೆಸುತ್ತಿದೆ. ಈತ ಪತ್ತೆಯಾದಲ್ಲಿ ಕೇರಳದಿಂದ ಐಸಿಸ್ಗೆ ಎಷ್ಟು ಮಂದಿಯನ್ನು ನೇಮಿಸಲಾಗಿದೆ ಎಂಬ ಮಾಹಿತಿ ಲಭಿಸಬಹುದು. ಕಾಶ್ಮೀರ ಮತ್ತು ಪುಣೆಯ ಕೆಲವು ಯುವಕರು ಐಸಿಸ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಇತ್ತೀಚೆಗೆ ಮಾಹಿತಿ ಲಭಿಸಿತ್ತು.
ಕೆಲವು ದಿನಗಳ ಹಿಂದೆ ಐಸಿಸ್ ಪತಾಕೆಗಳು ಮತ್ತು ಅದರ ಹಲವು ಕರಪತ್ರಗಳು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ‘ರಾ’ ನಡೆಸಿದ ತನಿಖೆಯಿಂದ ಕೇರಳದಲ್ಲೂ ಕೆಲವು ಯುವಕರನ್ನು ಐಸಿಸ್ಗೆ ನೇಮಕಾತಿ ನಡೆಸಲಾಗಿದೆಯೆಂದು ಶಂಕಿಸಲಾಗಿದೆ.
