Published On: Sun, Jan 17th, 2021

 ಕ್ಯಾ| ಗೋಪಾಲ ಶೆಟ್ಟಿ ಜನ್ಮ ಶತಮಾನ * ದೇಶ ಕಾಯ್ದ ವೀರಯೋಧಗೊಂದು ಸೆಲ್ಯೂಟ್..

ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಜನಿಸಿ, ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿ, ದೇಶ ಕಾಯುವ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅಪ್ರತಿಮ ಶೌರ್ಯಸಾಧಕ ಕ್ಯಾಪ್ಟನ್ ಗೋಪಾಲ ಎನ್ ಶೆಟ್ಟಿ ಇಂದು ಜೀವಂತವಾಗಿರುತ್ತಿದ್ದರೆ ಅವರ ಜನ್ಮ ಶತಮಾನದ ಸಂತಸದ ಕ್ಷಣಗಳು ಇನ್ನಷ್ಟು ಆಪ್ಯಾಯಮಾನವಾಗಿರುತ್ತಿತ್ತು. ಹೌದು, ಅವರು ನಮ್ಮನ್ನಗಲಿ ಈಗಾಗಲೇ ೨೧ ವರ್ಷ ಸಂದಿದೆ. ಸುಮಾರು ೨೮ ವರ್ಷ ದೇಶ ಸೇವೆಗೈದ ಅವರ ಧೀಮಂತ ಜೀವನದ ನೆನಪು ಸದಾ ಕಾಡುತ್ತಿರುತ್ತದೆ.gur-jan-16-capt. gopal shetty-1

ಬಾಲ್ಯದಲ್ಲೇ ಸೇನೆಯ ಮೇಲೆ ಅತೀವ ಆಸಕ್ತಿ ಹೊಂದಿದ್ದ ಗೋಪಾಲ ಶೆಟ್ಟಿಯವರು ೧೦ನೇ ತರಗತಿ ಮುಗಿಸಿ ನೇರವಾಗಿ ಮುಂಬೈಗೆ ತೆರಳಿ, ನಾಸಿಕ್ ಸಮೀಪದ ದೇವಲಾಲಿಯಲ್ಲಿ ಸೇನಾ ತರಬೇತಿ ಪಡೆದುಕೊಂಡು ೧೯೪೦ರಲ್ಲಿ ಸೇನೆಯಲ್ಲಿ ಹವಾಲ್ದಾರ್ ಹುದ್ದೆ ಪಡೆದುಕೊಂಡರು. ಮುಂದೆ ಶೆಟ್ಟಿಯವರ ಜೀವನದಲ್ಲಿ ನಡೆದಿರುವುದೆಲ್ಲವೂ ಅದ್ಭುತ, ರೋಚಕ ಹಾಗೂ ಸಾಧನೆಯ ಮಜಲುಗಳು….

ಒಂದು ಕಾಲವಿತ್ತು, ಸೇನೆಗೆ ಸೇರುವುದೆಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡುದೆಂಬ ಅರ್ಥವಿತ್ತು. ಹಾಗಾಗಿ ಯಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಈಗ ಸೇನಾ ಕ್ಷೇತ್ರದ ಸ್ಥಿತಿಯೇ ಭಿನ್ನವಾಗಿದೆ. ಸೇನೆಗೆ ಸೇರಿಕೊಳ್ಳುತ್ತೇವೆ ಎಂದರೂ ಸೇರಿಸಿಕೊಳ್ಳುವವರಿಲ್ಲ, ಕಠಿಣ ಮಾನದಂಡಗಳಿವೆ !gur-jan-16-capt. gopal shetty-2

ಕಠಿಣ ಪರಿಶ್ರಮದ ಮೂಲಕ ಗೆರಿಲ್ಲಾ ಯುದ್ಧತಂತ್ರ, ಜಂಗಲ್‌ವಾರ್, ಕಮಾಂಡೋ ಕಾರ್ಯಾಚರಣೆಯಂತಹ ಹಲವು ಸೇನಾ ಕೌಶಲ್ಯಗಳಲ್ಲಿ ಪಳಗಿದ್ದ ಶೆಟ್ಟಿಯವರು, ೧೯೪೪ರಲ್ಲಿ ರಾವಲ್ಪಿಂಡಿಯ(ಈಗ ಪಾಕಿಸ್ತಾನಕ್ಕೆ ಸೇರಿದೆ) ಬ್ರಿಟಿಷ್ ರೆಜಿಮೆಂಟಿಗೆ ಭಡ್ತಿ ಹೊಂದಿದ್ದರು. ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು. ಸುಭಾಷ್‌ಚಂದ್ರ ಬೋಸರ ನೇತೃತ್ವದಲ್ಲಿ ನಡೆದಿದ್ದ ಕೊರಿಯಾ ಯುದ್ಧದ ಸಂದರ್ಭದಲ್ಲಿ ಶೆಟ್ಟಿಯವರು ಜಪಾನ್ ಸೇನೆಗೆ ಸೆರೆ ಸಿಕ್ಕಿ ಯುದ್ಧ ಕೈದಿಯಾಗಿ ಸೆರೆಮನೆವಾಸ ಅನುಭವಿಸಿದ್ದರು. ಸೇನಾ ಕ್ಷೇತ್ರದಲ್ಲಿ ಇವರು ತೋರಿಸಿದ ಅತ್ಯದ್ಭುತ ಪ್ರೌಢಿಮೆಗಾಗಿ ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರಿಂದ ೧೯೫೨-೧೯೫೪ರವರೆಗೆ `ಮೆನ್ಶನ್ ಇನ್ ಡಿಸ್ಪ್ಯಾಚಸ್’ ಗೌರವ ಪಡೆದುಕೊಂಡಿದ್ದರು. ಅದಾಗಲೇ ಕ್ಯಾಪ್ಟನ್ ಹುದ್ದೆಗೆ ಭಡ್ತಿ ಪಡೆದಿದ್ದ ಗೋಪಾಲ ಶೆಟ್ಟಿ ಪೋರ್ಚುಗೀಸರಿಂದ ಗೋವಾ ವಿಮುಕ್ತಿಗಾಗಿ ನಡೆದ ೨೪ ಗಂಟೆಗಳ ಯುದ್ಧ, ೧೯೬೨ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆಗ ಅವರು ಸುಬೇದಾರ್ ಮೇಜರ್ ಹುದ್ದೆಯಲ್ಲಿದ್ದರು. ೧೯೫೬ರಲ್ಲಿ ನಡೆದಿದ್ದ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಕ್ಯಾ| ಶೆಟ್ಟಿಯವರು ಸಿಕ್ಕಿಂನಲ್ಲಿ ಬೇಹುಗಾರಿಕಾ ಸೇನಾ ತುಕಡಿಯಲ್ಲಿದ್ದರು. ಆ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ಕ್ಯಾ| ಶೆಟ್ಟಿಯವರು ಪಾಕ್ ವೈಮಾನಿಕ ದಾಳಿಗೆ ತುತ್ತಾಗಿ, ಗಂಭೀರ ಗಾಯಗೊಂಡು ಜಲಂಧರ್‌ನಲ್ಲಿ ಆಸ್ಪತ್ರೆ ಸೇರಿದ್ದರು.

ದೇಶಕ್ಕಾಗಿ ವಿಶಿಷ್ಟ ಸೇವೆಗೈದ ಕ್ಯಾ| ಗೋಪಾಲ ಶೆಟ್ಟಿಯವರಿಗೆ ೧೯೬೭ರಲ್ಲಿ ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ವಿಶಿಷ್ಟ ಸೇವಾ ಪದಕ ನೀಡಿ ಅಭಿನಂದಿಸಿದ್ದರು. ದೇಶ ರಕ್ಷಣೆಯ ಹಲವು ಸಂದರ್ಭಗಳಲ್ಲಿ ಅಪಾಯಕಾರಿ ಸನ್ನಿವೇಶಗಳನ್ನೂ ಲೆಕ್ಕಿಸದೆ ಮುನ್ನುಗ್ಗಿ ಎದುರಾಳಿಗಳ ಹುಟ್ಟಡಗಿಸಿದ್ದ ಕ್ಯಾ| ಶೆಟ್ಟಿ ಗಾಯಗೊಂಡ ಬಳಿಕ ಸೇನೆಯಲ್ಲಿ ಮುಂದುವರಿಲು ಸಾಧ್ಯವಾಗಿರಲಿಲ್ಲ. ಆದರೆ ದೇಶಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರಿಗೆ, ನಿವೃತ್ತಿ ಬಳಿಕವೂ ಕೆಲವು ಶೌರ್ಯ ಪ್ರಶಸ್ತಿಗಳು ಬಂದಿವೆ ಎಂಬುದು ವಿಶೇಷ.

ಒಂದೊಮ್ಮೆ ಕ್ಯಾ| ಗೋಪಾಲ ಶೆಟ್ಟಿಯವರು ಬದುಕಿದ್ದರೆ ಅವರಿಗೆ ಇಂದಿಗೆ(ಜ. ೨೧) ನೂರರ ಸಂಭ್ರಮ. ಅವರಿಲ್ಲದಿದ್ದರೂ ಅವರು ದೇಶಕ್ಕಾಗಿ ಸಲ್ಲಿಸಿದ ಅತ್ಯಮೂಲ್ಯ ಸೇವೆ ಶತಮಾನ ಕಳೆದರೂ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ. ಆದ್ದರಿಂದ ದೇಶ ಕಾಯ್ದ ವೀರಯೋಧನಿಗೆ ದೇಶಪ್ರೇಮಿಗಳಿಂದ ಒಂದು ಸೆಲ್ಯೂಟ್.

ಕ್ಯಾ| ಗೋಪಾಲ ಶೆಟ್ಟಿಯವರು ಜೀವಿತಾವಧಿಯಲ್ಲಿ ವಾಸ್ತವ್ಯ ಹೂಡಿದ್ದ ಮನೆ ಶಿರ್ಡಿಯಲ್ಲಿದೆ. ಇವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು, ಏಳು ಮಂದಿ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಇದ್ದಾರೆ.

ಅವರ ೨೧ನೇ ಪುಣ್ಯತಿಥಿಯಂದು(ನ. ೭) ಶಿರ್ಡಿಗೆ ಹತ್ತಿರದ `ಸೈನಿಕ್ ಫಾರ್ಮ್’ನ ಮನೆಯಲ್ಲಿರುವ ಸಮಾಧಿಗೆ ಕುಟುಂಬಿಕರು, ದೇಶಪ್ರೇಮಿಗಳಿಂದ ಪುಷ್ಪನಮನ ತಪ್ಪದೆ ಸಂದಾಯವಾಗುತ್ತಿದೆ.gur-jan-16-capt. gopal shetty-3

ನೂರನೇ ಹುಟ್ಟುಹಬ್ಬ :

ಜನವರಿ ೨೧ರಂದು ಕ್ಯಾ| ಗೋಪಾಲ ಶೆಟ್ಟಿಯವರ ನೂರನೇ ಜನ್ಮ ದಿನಾಚರಣೆ ನಡೆಯಲಿದೆ. ಹುಟ್ಟುಹಬ್ಬದ ಆಚರಣೆಗಾಗಿ ಶಿರ್ಡಿಯಲ್ಲಿರುವ ಸೈನಿಕ್ ಫಾರ್ಮ್ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದ್ದು, ಸಂಭ್ರಮಾಚರಣೆಯೊಂದಿಗೆ ಅವರ ಸಾಧನೆ ಸ್ಮರಿಸೋಣ

ಬರೆಹ : ಧನಂಜಯ ಗುರುಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter