ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ನಡೆಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಪುಂಜಾಲಕಟ್ಟೆ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಾಹನ ಸಹಿತ ಲಕ್ಷಾಂತರ ಮೌಲ್ಯದ ಅಡಿಕೆ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪಂಜಿಕಲ್ಲು ನಿವಾಸಿ ಪ್ರಸಾದ್ ಮತ್ತು ಈತನ ಸ್ನೇಹಿತ ಪಂಜಿಕಲ್ಲು ಗ್ರಾಮದ ಅಮೈ ನಿವಾಸಿ ಸಂತು ಯಾನೆ ಸಂತೋಷ್ ಪೂಜಾರಿ ಎಂದು ಗುರುತಿಸಲಾಗಿದೆ.
ಇವರಿಂದ ಸುಮಾರು ರೂ 1.5 ಲಕ್ಷಕ್ಕೂ ಮಿಕ್ಕಿ ಮೌಲ್ಯದ ಅಡಿಕೆ ತುಂಬಿದ ಗೋಣಿಚೀಲ ಮತ್ತು ಅಡಿಕೆ ಸಾಗಾಟಕ್ಕೆ ಬಳಸುತ್ತಿದ್ದಾರೆನ್ನಲಾದ ಟೆಂಪೋ ವಶಪಡಿಸಿಕೊಳ್ಳಲಾಗಿದೆ.

ಪುಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ ಕುಮಾರ್ ನೇತೃತ್ವದ ತಂಡವು ಗುರುವಾರ ಮುಂಜಾನೆ ಪುಂಜಾಲಕಟ್ಟೆ ಸಮೀಪದ ದೈಕಿನಕಟ್ಟೆ ಎಂಬಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ವಾಹನ ತಪಾಸಣೆ ನಡೆಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಬಂಟ್ವಾಳದ ಕಡೆಯಿಂದ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತ್ತಿದ್ದ ಗೂಡ್ಸ್ ಟೆಂಪೊವೊಂದನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರನ್ನು ಕಂಡ ಟೆಂಪೊ ಚಾಲಕ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಟೆಂಪೊವನ್ನು ಬೆನ್ನಟ್ಟಿ ನಿಲ್ಲಿಸಿ ಪರಿಶೀಲಿಸಿದಾಗ ಟೆಂಪೊದಲ್ಲಿ ಅಡಿಕೆ ತುಂಬಿದ ಗೋಣಿಚೀಲ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಡಿಕೆ ಬಗ್ಗೆ ಸೂಕ್ತ ದಾಖಲೆ ಪತ್ರಗಳು ಇಲ್ಲದಿರುವುದನ್ನು ಕಂಡ ಪೊಲೀಸರು ಟೆಂಪೋ ಚಾಲಕ ಪ್ರಸಾದ್ ಮತ್ತು ಸಂತೋಷ್ ಪೂಜಾರಿ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಅಡಿಕೆ ಕಳ್ಳತನ ಜಾಲ ಬಯಲಿಗೆ ಬಂದಿದೆ. ಈ ನಡುವೆ ಮಾರುತಿ ಒಮ್ನಿ ಕಾರಿನಲ್ಲಿ ತಾಲ್ಲೂಕಿನ ವಿವಿಧೆಡೆಯಿಂದ ಕಳ್ಳತನ ನಡೆಸಿದ ಅಡಿಕೆ ಸಾಗಾಟ ಮತ್ತು ಟೆಂಪೋದಲ್ಲಿ ಮರ ಕಡಿದು ಮಾರಾಟ ಮಾಡುವ ಜಾಲವೂ ಇವರನ್ನು ಸುತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಗೋಡಾನ್ನಿಂದಲೂ ಲಕ್ಷಾಂತರ ಮೌಲ್ಯದ ಅಡಿಕೆ ಕಳವು ನಡೆದಿದ್ದು, ಈ ಕೃತ್ಯದಲ್ಲಿಯೂ ಇದೇ ತಂಡ ಭಾಗಿಯಾಗಿರುವುದು ತನಿಖೆ ವೇಳೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಳವು ಮಾಡಿರುವ ಅಡಿಕೆಯನ್ನು ಮಾರಾಟ ಮಾಡಲು ಬೆಳ್ತಂಗಡಿ ಕಡೆಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಗುರುವಾರತ ಹಾಜರು ಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾಯರ್ಾಚರಣೆಯಲ್ಲಿ ಎಎಸೈ ಕುಟ್ಟಿ ಎಂ.ಕೆ., ಸಿಬ್ಬಂದಿಗಳಾದ ದೇವಪ್ಪ, ಲಾರೆನ್ಸ್, ಸುಭಾಶ್ ಶೆಣೈ, ವೆಂಕಪ್ಪ, ಅಬ್ದುಲ್ ಲತೀಫ್, ಇಬ್ರಾಹಿಂ, ಸತೀಶ್ ಮತ್ತು ವಾಹನ ಚಾಲಕ ಆಸಿಫ್ ಪಾಲ್ಗೊಂಡಿದ್ದರು.
